ಹಾಸನ : ಮುಖ್ಯಮಂತ್ರಿ ಬದಲಾವಣೆಯಂಥ ವಿಚಾರವನ್ನು ಬೀದಿಲಿ ನಿತ್ಕೊಂಡು ಮಾತನಾಡಬಾರದು. ಚುನಾವಣೆ ದೃಷ್ಟಿಯಿಂದ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಸಚಿವ ಗೋಪಾಲಯ್ಯ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ರಾಷ್ಟ್ರದಲ್ಲಿ ದೊಡ್ಡ ಪಕ್ಷವಾದ ಬಿಜೆಪಿಯಲ್ಲಿ ವರಿಷ್ಠರಿದ್ದಾರೆ, ವರಿಷ್ಠರು ಹೇಳಿದ ಮಾತಿಗೆ ಗೌರವ ಕೊಡಬೇಕಾಗುತ್ತದೆ ಎಂದರು.
Advertisement
Advertisement
ಮುಂದಿನ ವರ್ಷದಲ್ಲಿ ಚುನಾವಣೆ ಇದೆ. ಚುನಾವಣೆ ದೃಷ್ಟಿಯಿಂದ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಮುಂದಿನ ಚುನಾವಣೆಯ ನೇತೃತ್ವವನ್ನು ಬೊಮ್ಮಾಯಿ ಅವರೇ ವಹಿಸಿಕೊಳ್ಳುತ್ತಾರೆ. ಬೊಮ್ಮಯಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಯತ್ನಾಳ್ ಅವರು ಪಕ್ಷದಲ್ಲಿ ಹಿರಿಯರಿದ್ದಾರೆ. ಏನೇ ಇದ್ದರು ಪಕ್ಷದ ವರಿಷ್ಠರು ಮಾತನಾಡಿ ಬಗೆಹರಿಸುತ್ತಾರೆ ಎಂದು ಹೇಳಿದರು.
Advertisement
Advertisement
ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಸಚಿವ ಅಶ್ವಥ್ ನಾರಾಯಣ್ ಸಂಬಂಧಿ ಭಾಗಿ ವಿಚಾರವಾಗಿ ಮಾತನಾಡಿದ ಅವರು, ಅದೆಲ್ಲಾ ಶುದ್ಧ ಸುಳ್ಳು. ಅಶ್ವಥ್ ನಾರಾಯಣ್ ಅವರ ರಾಜಕೀಯ ಬೆಳವಣಿಗೆಯನ್ನು ನೋಡಿ ಸಹಿಸದವರು ಈ ರೀತಿ ಮಾಡುತ್ತಿದ್ದಾರೆ. ಅಶ್ವಥ್ ನಾರಾಯಣ್ ಭಾಗಿಯಾಗಿದ್ದಾರೆ ಎಂಬ ಯಾವುದಾದರೂ ಸಾಕ್ಷಿ ಇದ್ದರೆ ಕೊಡಲಿ. ಆರೋಪ ಮಾಡುತ್ತಿರುವ ಕಾಂಗ್ರೆಸ್ ಸಾಕ್ಷಿ ತಂದು ಕೊಡಲಿ ಎಂದು ಸವಾಲು ಹಾಕಿದರು.
ರಾಜಕೀಯವಾಗಿ ತೇಜೋವಧೆ ಮಾಡುವುದನ್ನು ಬಿಡಬೇಕು. ಏನಾದರು ಪುರಾವೆ ಇದ್ದರೆ ಕೋರ್ಟ್‍ಗೆ ಹೋಗಲಿ. ಸರ್ಕಾರ ಈಗಾಗಲೇ ಸಿಐಡಿ ತನಿಖೆಗೆ ಕೊಟ್ಟಿದೆ. ಹಲವಾರು ಅಧಿಕಾರಿಗಳನ್ನು ಬಂಧಿಸಿದ್ದಾರೆ. ಯಾರಾದರೂ ಇದರಲ್ಲಿ ಭಾಗಿಯಾಗಿದ್ದಾರೆ ಹೊರಗಡೆ ಬರುತ್ತದೆ. ಹಿಂದಿನ ಸರ್ಕಾರದಲ್ಲೂ ಇದೇ ರೀತಿ ನಡೆದಿದೆ. ಹಿಂದೆ ಸರ್ಕಾರದಲ್ಲಿ ಏನು ನಡೆದಿದೆ ಅಂತ ನಾನು ಹೇಳುತ್ತೇನಿ ಅದು ತನಿಖೆಯಾಗಬೇಕು. ಅವಾಗ ಏನಾಗಿದೆ ಅಂತ ಗೊತ್ತಾಗುತ್ತೆ ಎಂದರು. ಇದನ್ನೂ ಓದಿ: ಸಂಪ್ರದಾಯದ ಹೆಸರಿನಲ್ಲಿ ಅನ್ಯಾಯ ಮಾಡ್ತಾರೆ ಅಂದರೆ ಅವರ ಸಂಸ್ಕೃತಿ ಬಿಂಬಿಸುತ್ತೆ: ಶ್ರೀನಿವಾಸ ಪೂಜಾರಿ
ಯಾವುದೇ ಕಾರಣಕ್ಕೂ ಅಶ್ವಥ್ ನಾರಾಯಣ್ ಇದರಲ್ಲಿ ಭಾಗಿಯಾಗಿಲ್ಲ. ನಾವು ಅಶ್ವಥ್ ನಾರಾಯಣ್ ಅವರನ್ನು ನೋಡಿಯೇ ಇಲ್ಲ ಎಂದು ಆರೋಪಿ ಸ್ಥಾನದಲ್ಲಿರುವ ಹುಡಗನ ತಂದೆಯೇ ಹೇಳಿದ್ದಾರೆ. ಅಶ್ವಥ್ ನಾರಾಯಣ್ ಅವರನ್ನು ರಾಜಕೀಯವಾಗಿ ಬಲಿಪಶು ಮಾಡಬೇಕೆಂದು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮುಖ್ಯಮಂತ್ರಿಯಾಗಲು ಎರಡೂವರೆ ಸಾವಿರ ಕೋಟಿ ಬೇಕು ಯತ್ನಾಳ್ ಹೇಳಿಕೆ ತನಿಖೆ ಆಗಲಿ: ಡಿ.ಕೆ. ಶಿವಕುಮಾರ್