ವಾಷಿಂಗ್ಟನ್: ಅಮೆರಿಕದ ಸುಪ್ರೀಂ ಕೋರ್ಟ್ ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ರದ್ದುಗೊಳಿಸಿದ ಬಳಿಕ ಅಮೆರಿಕದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಹಲವು ಟೆಕ್ನಾಲಜಿ ಕಂಪನಿಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ಗರ್ಭಪಾತ ಮಾಡಿಸಿಕೊಳ್ಳಲು ವಿದೇಶ ಪ್ರಯಾಣಕ್ಕೆ ಸಹಕರಿಸುವುದಾಗಿ ತಿಳಿಸಿವೆ. ಇದೀಗ ಗೂಗಲ್ ಕೂಡಾ ಒಂದು ಮಹತ್ವದ ಸೇವೆ ನೀಡಲು ಮುಂದಾಗಿದೆ.
ಗೂಗಲ್ ತನ್ನ ಬಳಕೆದಾರರಿಗೆ ಗರ್ಭಪಾತ ಕ್ಲಿನಿಕ್‌ಗಳಿಗೆ ಭೇಟಿ ನೀಡಿದ ಬಳಿಕ ಅವರ ಲೊಕೇಶನ್ ಹಿಸ್ಟರಿಗಳನ್ನು ಅಳಿಸುವುದಾಗಿ ತಿಳಿಸಿದೆ. ಈ ಮೂಲಕ ಮಹಿಳೆಯರಿಗೆ ತಮ್ಮ ಗೌಪ್ಯತೆಯನ್ನು ಕಾಪಾಡಲು ಸಹಕರಿಸಲು ಮುಂದಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಗರ್ಭಪಾತ ಹಕ್ಕು ನಿಷೇಧ: ಆಸ್ಟ್ರೇಲಿಯಾದಲ್ಲಿ ಹೋರಾಟದ ಕಿಚ್ಚು
ಫರ್ಟಿಲಿಟಿ ಸೆಂಟರ್, ವ್ಯಸನ ಚಿಕಿತ್ಸಾಲಯ, ಗರ್ಭಪಾತದ ಆಸ್ಪತ್ರೆಗಳಿಗೆ ಯಾರಾದರೂ ಭೇಟಿ ನೀಡಿದರೆ, ಅದನ್ನು ನಮ್ಮ ಸಿಸ್ಟಂ ಗುರುತಿಸಿದ್ದಲ್ಲಿ ನಾವು ಆ ಲೊಕೇಶನ್ ಹಿಸ್ಟರಿ ಡೇಟಾಗಳನ್ನು ಅಳಿಸಿಹಾಕುತ್ತೇವೆ. ಈ ಹೊಸ ವ್ಯವಸ್ಥೆ ಮುಂದಿನ ವಾರಗಳಲ್ಲಿ ಜಾರಿಗೆ ಬರಲಿದೆ ಎಂದು ಗೂಗಲ್‌ನ ಹಿರಿಯ ಉಪಾಧ್ಯಕ್ಷ ಫಿಟ್ಜ್ಪ್ಯಾಟ್ರಿಕ್ ತಿಳಿಸಿದ್ದಾರೆ. ಇದನ್ನೂ ಓದಿ: 48 ವರ್ಷಗಳ ಹಿಂದೆ ಹೀಗಿತ್ತು ನನ್ನ ರೆಸ್ಯೂಮ್ – ಉದ್ಯೋಗಾಕಾಂಕ್ಷಿಗಳಿಗೆ ಆತ್ಮವಿಶ್ವಾಸ ತುಂಬಿದ ಬಿಲ್‌ಗೇಟ್ಸ್
ಕಳೆದ 50 ವರ್ಷಗಳಿಂದ ಅಮೆರಿಕದಲ್ಲಿ ಜಾರಿಯಲ್ಲಿದ್ದ ಮಹಿಳೆಯರ ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ಅಲ್ಲಿನ ಸುಪ್ರೀಂ ಕೋರ್ಟ್ ಜೂನ್ 24 ರಂದು ರದ್ದುಗೊಳಿಸಿದೆ. ಇದನ್ನು ವಿರೋಧಿಸಿ ಅಮೆರಿಕದ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ಹಕ್ಕನ್ನು ರಕ್ಷಿಸಲು ಯತ್ನಿಸುವುದಾಗಿ ತಿಳಿಸಿದ್ದಾರೆ.