ಯುಪಿಎಸ್‍ಸಿ ಪರೀಕ್ಷೆಯಲ್ಲಿ ಕಾಪಿ ಮಾಡಲು ಸಹಕರಿಸಿದ ಐಪಿಎಸ್ ಅಧಿಕಾರಿ ಪತ್ನಿ ಬಂಧನ

Public TV
2 Min Read
ips cheating

– ಗೂಗಲ್ ಡ್ರೈವ್, ಮೈಕ್ರೋ ಕ್ಯಾಮೆರಾ, ಬ್ಲೂಟೂತ್ ಬಳಸಿದ್ರು

ಹೈದರಾಬಾದ್: ಯುಪಿಎಸ್‍ಸಿ ಮುಖ್ಯ ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ಸಹಕರಿಸಿದ ಆರೋಪದ ಮೇಲೆ ಐಪಿಎಸ್ ಅಧಿಕಾರಿಯೊಬ್ಬರ ಪತ್ನಿಯನ್ನು ಹೈದರಾಬಾದ್ ಪೊಲೀಸರು ಮಂಗಳವಾರದಂದು ಬಂಧಿಸಿದ್ದಾರೆ.

ಐಪಿಎಸ್ ಅಧಿಕಾರಿ ಸಫೀರ್ ಕರೀಂ ಅವರ ಪತ್ನಿ ಜಾಯ್ಸಿ ಬಂಧಿತರಾದ ಮಹಿಳೆ. ಸದ್ಯ ತರಬೇತಿಯಲ್ಲಿರುವ ಕರೀಂ ಸೋಮವಾರದಂದು ಪರೀಕ್ಷೆಯಲ್ಲಿ ಕಾಪಿ ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಜಾಯ್ಸಿ ತನ್ನ ಗಂಡನಿಗೆ ಸಹಾಯ ಮಾಡಲು ಹೈ-ಟೆಕ್ ವ್ಯವಸ್ಥೆಗಳನ್ನ ನೀಡಿದ ಆರೋಪದ ಮೇಲೆ ಹೈದರಾಬಾದ್‍ನ ಅಶೋಕ್‍ನಗರದಲ್ಲಿರುವ ಲಾ ಎಕ್ಸೆಲ್ಲೆನ್ಸ್ ಐಎಎಸ್ ಸ್ಟಡಿ ಸರ್ಕಲ್‍ನ ನಿರ್ದೇಶಕರಾದ ಡಾ. ಪಿ. ರಾಮಬಾಬು ಎಂಬವರನ್ನೂ ಕೂಡ ಪೊಲೀಸರು ಬಂಧಿಸಿದ್ದಾರೆ. ಚೆನ್ನೈ ಪೊಲೀಸರು ನೀಡಿದ ಮಾಹಿತಿ ಆಧರಿಸಿ ಹೈದರಾಬಾದ್ ಪೊಲೀಸರು ಬಂಧನ ಮಾಡಿದ್ದಾರೆ.

ips cheating 7

ನಾವು ಇಬ್ಬರೂ ಆರೋಪಿಗಳನ್ನ ಡಿಸಿಪಿ ಶ್ರೇಣಿಯ ಅಧಿಕಾರಿ ಪಿ. ಅರವಿಂದನ್ ನೇತೃತ್ವದ ಚೆನ್ನೈ ಪೊಲೀಸ್ ತಂಡಕ್ಕೆ ಒಪ್ಪಿಸಿದ್ದೇವೆ. ಚೆನ್ನೈಗೆ ಕರೆದೊಯ್ಯುವ ಮುನ್ನ ಈಗ ಹೈದರಾಬಾದ್‍ನಲ್ಲಿ ಅವರನ್ನು ವಿಚಾರಣೆ ಮಾಡಲಾಗ್ತಿದೆ ಎಂದು ಹೈದರಾಬಾದ್ ಸೆಂಟ್ರಲ್ ಝೋನ್ ಟಾಸ್ಕ್ ಫೋರ್ಸ್‍ನ ಇನ್‍ಸ್ಪೆಕ್ಟರ್ ಎಸ್ ಶ್ರೀನಿವಾಸ್ ರಾವ್ ತಿಳಿಸಿದ್ದಾರೆ.

ips cheating 6

ಜಾಯ್ಸಿ ಹಾಗೂ ರಾಮಬಾಬು ಕರೀಮ್‍ಗೆ ಉತ್ತರಗಳನ್ನು ರವಾನಿಸಲು ಬಳಸಿದ ಹಾರ್ಡ್ ಡಿಸ್ಕ್, ಲ್ಯಾಪ್‍ಟಾಪ್, ಐಪ್ಯಾಡ್ ಹಾಗೂ ಇತರೆ ಉಪಕರಣಗಳನ್ನು ಟಾಸ್ಕ್ ಫೋರ್ಸ್ ವಶಪಡಿಸಿಕೊಂಡು ಚೆನ್ನೈ ಪೊಲೀಸರಿಗೆ ಹಸ್ತಾಂತರಿಸಿದೆ. ಕರೀಂ ಸದ್ಯ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ips cheating 8

ಕಾಪಿ ಮಾಡಿದ್ದು ಹೇಗೆ: ಕರೀಂ ಪ್ರಶ್ನೆಪತ್ರಿಕೆಯನ್ನು ಸ್ಕ್ಯಾನ್ ಮಾಡಿ ಗೂಗಲ್ ಡ್ರೈವ್ ಮೂಲಕ ತನ್ನ ಹೆಂಡತಿಗೆ ಕಳಿಸಿದ್ದರು. ಪತ್ನಿ ಜಾಯ್ಲಿ ಬ್ಲೂಟೂತ್ ಮೂಲಕ ಉತ್ತರಗಳನ್ನ ಒದಗಿಸಿದ್ದರು. ಅಧಿಕಾರಿಗಳು ಕರೀಂ ಅವರನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದರು. ಆದ್ರೆ ತನಿಖೆಯಿಂದ ತಮಗೆ ಬೇಕಿದ್ದ ಸುಳಿವು ಸಿಗೋವರೆಗೂ ವಿಷಯವನ್ನ ಗೌಪ್ಯವಾಗಿಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಕರೀಂ ಪರೀಕ್ಷೆಯಲ್ಲಿ ನಕಲು ಮಾಡುವುದಕ್ಕಾಗಿ ಮೈಕ್ರೋ ಕ್ಯಾಮೆರಾದ ಆಧಾರದ ಮೇಲೆ ಕೆಲಸ ಮಾಡೋ ಯಂತ್ರವನ್ನ ಸಿದ್ಧಪಡಿಸಿದ್ರು. ಅದನ್ನ ಎದೆಯ ಸಮೀಪ ಇಟ್ಟುಕೊಂಡು ಗೂಗಲ್ ಡ್ರೈವ್‍ಗೆ ಕನೆಕ್ಟ್ ಮಾಡಿಕೊಂಡಿದ್ರು. ಇದರ ಕ್ಯಾಮೆರಾದಿಂದ ಪೇಪರ್ ಸ್ಕ್ಯಾನ್ ಮಾಡಿ ಗೂಗಲ್ ಡ್ರೈವ್ ಮೂಲಕ ಬೇಕಾದವರಿಗೆ ಕಳಿಸಬಹುದಿತ್ತು. ಇದನ್ನ ಸ್ವೀಕರಿಸಿದವರು ಮಾತಿನ ಮೂಲಕ ಉತ್ತರಗಳನ್ನ ನೀಡಿದ್ರೆ ಅದು ಬ್ಲೂಟೂತ್ ಮೂಲಕ ಇವರನ್ನ ತಲುಪುತ್ತಿತ್ತು. ಒಂದು ವೇಳೆ ಧ್ವನಿ ಕೇಳಿಸುತ್ತಿಲ್ಲವಾದ್ರೆ ಅದನ್ನು ಅವರು ಪೇಪರ್ ಮೇಲೆ ಪೆನ್ಸಿಲ್‍ನಿಂದ ಬರೆದು, ಅದನ್ನು ಸ್ಕ್ಯಾನ್ ಮಾಡಿ ಮತ್ತೊಮ್ಮೆ ಕಳಿಸುತ್ತಿದ್ರು. ಆಗ ಆ ಕಡೆ ಇರೋ ವ್ಯಕ್ತಿ ಜೋರಾಗಿ ಮಾತನಾಡುತ್ತಿದ್ರು ಎಂದು ಪೊಲೀಸರು ವಿವರಿಸಿದ್ದಾರೆ.

ips cheating 9

ಕರೀಂ, ಜಾಯ್ಸಿ ಇಬ್ಬರೂ ಕೇರಳ ಮೂಲದವರು. ಕರೀಂ 2015ರಲ್ಲಿ ಐಪಿಎಸ್‍ಗೆ ಆಯ್ಕೆಯಾಗಿ ಹೈದರಾಬಾದ್‍ನ ಸರ್ದಾರ್ ವಲ್ಲಬಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ತಮಿಳುನಾಡು ಕೇಡರ್‍ಗೆ ಕೆಲಸಕ್ಕೆ ನಿಯೋಜನೆಗೊಂಡಿದ್ದರು. ಐಪಿಎಸ್ ಆಯ್ಕೆಗೆ ತೃಪ್ತರಾಗದ ಕರೀಂ ಐಎಎಸ್ ಮಾಡಲೇಬೆಂಕೆಂದು ನಕಲು ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ips cheating 5

ಐಎಎಸ್ ಕೋಚಿಂಗ್ ಸೆಂಟರ್ ನಡೆಸ್ತಿದ್ರು: ಕರೀಂ ಹಾಗೂ ರಾಮಬಾಬು ಒಳ್ಳೇ ಸ್ನೇಹಿತರಾಗಿದ್ದರು ಎನ್ನಲಾಗಿದೆ. ಕರೀಂ ರಾಮಬಾಬು ಜೊತೆಗೂಡಿ ತಿರುವನಂತಪುರಂನಲ್ಲಿ ಕರೀಮ್ಸ್ ಲಾ ಎಕ್ಸೆಲೆನ್ಸ್ ಎಂಬ ಹೆಸರಿನಲ್ಲಿ ಐಎಎಸ್ ಕೋಚಿಂಗ್ ಸೆಂಟರ್‍ವೊಂದನ್ನ ನಡೆಸುತ್ತಿದ್ರು ಎಂದು ಇನ್‍ಸ್ಪೆಕ್ಟರ್ ರಾವ್ ಹೇಳಿದ್ದಾರೆ.

ips cheating 4

ips cheating 1

ips cheating 3

Share This Article
Leave a Comment

Leave a Reply

Your email address will not be published. Required fields are marked *