ಬೆಂಗಳೂರು: ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದ 2019 ಲೋಕಸಭಾ ಚುನಾವಣೆ ಇಂದಿನಿಂದ ಆರಂಭಗೊಂಡ ಹಿನ್ನೆಲೆಯಲ್ಲಿ ಸರ್ಚ್ ಇಂಜಿನ್ ಗೂಗಲ್ ಡೂಡಲ್ ಗೌರವ ನೀಡಿದೆ. ಮತದಾನದ ಚಿಹ್ನೆಯ ಡೂಡಲ್ ತಯಾರಿಸಿ ಜಾಗೃತಿ ಮಾಡಿಸಿದೆ.
ತೋರು ಬೆರಳಿಗೆ ಮತದಾನ ಮಾಡಿರುವ ಚಿಹ್ನೆಯ ಶಾಯಿ ಇರುವ ಚಿತ್ರವಿರುವ ಡೂಡಲ್ ಅನ್ನು ಗೂಗಲ್ ಭಾರತದ ಹೋಮ್ ಪೇಜ್‍ನಲ್ಲಿ ಹಾಕಿದೆ. ಈ ಡೂಡಲ್ ಮೇಲೆ ಕ್ಲಿಕ್ ಮಾಡಿದರೆ ಮತದಾನ ಪ್ರಕ್ರಿಯೆಯ ವಿವರಗಳು ಹಾಗೂ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದವರಿಗೆ ಬೇಕಾದ ಸಂರ್ಪೂಣ ಮಾಹಿತಿಯನ್ನು ಪಡೆಯಬಹುದಾಗಿದೆ.
ಹೇಗೆ ಮತದಾನ ಪ್ರಕ್ರಿಯೆ ನಡೆಯುತ್ತದೆ? ತಮ್ಮ ಮತ ಇರುವ ಬೂತ್ ಪತ್ತೆ ಹಚ್ಚುವುದು ಹೇಗೆ? ಯಾವ ಕ್ಷೇತ್ರದಲ್ಲಿ ಎಷ್ಟು ಅಭ್ಯರ್ಥಿಗಳಿದ್ದಾರೆ? ಇವಿಎಂ (ವಿವಿಪ್ಯಾಟ್) ಬಳಕೆ ಮಾಡುವುದು ಹೇಗೆ? ಸೇರಿದಂತೆ ಚುನಾವಣಾ ದಿನಾಂಕಗಳ ಮಾಹಿತಿಯನ್ನು ಪಡೆಯಬಹುದು.
2019 ರ ಚುನಾವಣೆ ಏಳು ಹಂತಗಳಲ್ಲಿ 543 ಲೋಕಸಭಾ ಕ್ಷೇತ್ರಗಳಲ್ಲಿ ನಡೆಯಲಿದ್ದು, ಮೇ 23ಕ್ಕೆ ಫಲಿತಾಂಶ ಹೊರ ಬರಲಿದೆ. ಕರ್ನಾಟಕದಲ್ಲಿ ಏ.18 ಮತ್ತು ಏ.23 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.