ಬೆಂಗಳೂರು: ಇಂದು ಕನ್ನಡಿಗರ ಹೆಮ್ಮೆಯ ಸರ್.ಎಂ. ವಿಶ್ವೇಶ್ವರಯ್ಯ ಅವರ 157ನೇ ಜನ್ಮದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಗೂಗಲ್ ಅವರು ಅವರ ಫೋಟೋವನ್ನು ಡೂಡಲ್ ನಲ್ಲಿ ಹಾಕುವ ಮೂಲಕ ಅವರಿಗೆ ಗೌರವವನ್ನು ಸೂಚಿಸಿದೆ.
ಎಂಜಿನಿಯರ್ ಗಳ ದಿನಾಚರಣೆಯನ್ನು ಸರ್.ಎಂ. ವಿಶ್ವೇಶ್ವರಯ್ಯ ಜನ್ಮ ದಿನವೆಂದು ಆಚರಿಸಲಾಗುತ್ತದೆ. ವಿಶ್ವೇಶ್ವರಯ್ಯ ಅವರು ಎಂಜಿನಿಯರ್ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದು, ಜೊತೆಗೆ ಸೇವೆ ಸಲ್ಲಿಸಿದ್ದಾರೆ. ಆದ್ದರಿಂದ ಅವರ ಹುಟ್ಟುಹಬ್ಬವನ್ನು ಎಂಜಿನಿಯರ್ಸ್ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
ಇವರು ಪೂರ್ಣ ಹೆಸರು ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಇವರು ಸೆಪ್ಟೆಂಬರ್ 15, 1861ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಗ್ರಾಮದಲ್ಲಿ ಜನಿಸಿದ್ದರು. ಪುಣೆಯ ವಿಜ್ಞಾನ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ದರು.
ವಿಶ್ವೇಶ್ವರಯ್ಯ ಅವರು ಮೊದಲು 1884ರಲ್ಲಿ ಮುಂಬಯಿ ನಗರದಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರುವ ಮೂಲಕ ವೃತ್ತಿ ಜೀವನ ಆರಂಭಿಸಿದರು. ಬಳಿಕ 1912ರಿಂದ 1918ರವರೆಗೆ ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದರು. ಮೈಸೂರಿನ ಕೃಷ್ಣರಾಜಸಾಗರ (ಕೆಆರ್‍ಎಸ್) ಡ್ಯಾಂನ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅಣೆಕಟ್ಟು ನಿರ್ಮಾಣ ಮಾಡಲು ಇವರೇ ಸ್ಪೂರ್ತಿಯಾಗಿದ್ದರಿಂದ ಇಂದಿಗೂ ಕೆಆರ್ ಎಸ್ ನಿರ್ಮಾಣವನ್ನು ವಿಶ್ವೇಶ್ವರಯ್ಯ ಅವರ ಕೊಡುಗೆ ಎಂದು ಗುರುತಿಸಲಾಗುತ್ತದೆ.
ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗ ಬ್ರಿಟಿಷ್ ಸರ್ಕಾರ ಅವರಿಗೆ ‘ಸರ್’ ಪದವಿಯನ್ನು ನೀಡಿದೆ. ಬಳಿಕ ವಿಶ್ವೇಶ್ವರಯ್ಯ ಅವರು ಸಮಾಜಕ್ಕಾಗಿ ನೀಡಿರುವ ಕೊಡುಗೆಯನ್ನು ಗುರುತಿಸಿ ಭಾರತ ಸರ್ಕಾರ 1955ರಲ್ಲಿ ಅವರಿಗೆ ‘ಭಾರತ ರತ್ನ’ ನೀಡಿ ಗೌರವಿಸಲಾಗಿದೆ.
ಅಷ್ಟೇ ಅಲ್ಲದೆ ಭಾರತ ರತ್ನ ಪಡೆದ ಮೊದಲು ಕನ್ನಡಿಗರಾಗಿದ್ದಾರೆ. ಕರ್ನಾಟಕದಲ್ಲಿ ಹೆಚ್ಚಾಗಿ ಶಾಲಾ-ಕಾಲೇಜುಗಳಿಗೆ ಇವರ ಹೆಸರನ್ನಿಟ್ಟು ಗೌರವಿಸಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv