Dakshina Kannada
ದೇಶದಾದ್ಯಂತ ದೀಪಾವಳಿ ಸಂಭ್ರಮ- ಕುದ್ರೋಳಿಯಲ್ಲಿ ಗೂಡು ದೀಪಗಳ ಚಿತ್ತಾರ

ಮಂಗಳೂರು: ದೀಪಾವಳಿ ಬಂದರೆ ಸಾಕು ಕರಾವಳಿಯ ಮನೆ ಮನೆಗಳಲ್ಲಿ ಗೂಡುದೀಪಗಳು ಬೆಳಗುತ್ತಿದ್ದವು. ಆದರೆ ಈ ಬಾರಿ ಅಲ್ಲಿನ ಕುದ್ರೋಳಿಯ ಶ್ರೀ ಗೋಕರ್ಣನಾಥ ದೇವಸ್ಥಾನದ ಮುಂಭಾಗ ಸಹಸ್ರಾರು ಸಂಖ್ಯೆಯಲ್ಲಿ ಗೂಡುದೀಪಗಳು ಕಂಗೊಳಿಸುತ್ತಿವೆ. ಒಂದನ್ನೊಂದು ಮೀರಿಸುವ ಈ ಗೂಡುದೀಪಗಳು ಜನರನ್ನು ತನ್ನತ್ತ ಸೆಳೆಯುತ್ತಿವೆ.
ದೀಪಗಳಿಂದಾಗಿರೋ ದೋಣಿ, ನವಿಲಿನಾಕೃತಿಯೊಳಗೆ ಬೆಳಕು, ಗೂಡುದೀಪದಲ್ಲಿ ಯಕ್ಷಗಾನ ಕಲಾವಿದರ ಚಿತ್ತಾರ, ಗೂಡುದೀಪಗಳ ಬೆಳಕಲ್ಲಿ ರಾಮಮಂದಿರ ಪರಿಕಲ್ಪನೆ, ಕಡಲೇಕಾಯಿ ಬೀಜದಲ್ಲಿ ಗೂಡುದೀಪ- ಹೀಗೆ ವಿವಿಧ ರೀತಿಯಲ್ಲಿ ಒಂದಕ್ಕಿಂತಾ ಒಂದು ಅದ್ಭುತವಾಗಿ ಕಂಗೊಳಿಸುತ್ತಿವೆ.
ಸ್ಥಳೀಯ ವಾಹಿನಿ ಸುಮಾರು 18 ವರ್ಷಗಳಿಂದ ದೀಪಾವಳಿ ಹಬ್ಬದಂದು ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದ ಸಹಯೋಗದೊಂದಿಗೆ ಗೂಡುದೀಪ ಸ್ಪರ್ಧೆಯನ್ನು ಆಯೋಜಿಸಿಕೊಂಡು ಬರುತ್ತಿದೆ.
ದೀಪಾವಳಿ ಹಬ್ಬ ಬಂತು ಎಂದರೆ ತುಳುನಾಡಿನ ಪ್ರತಿ ಮನೆಗಳ ಮುಂದೆ ಗೂಡು ದೀಪಗಳು ಚಿತ್ತಾರಗೊಳ್ಳುತ್ತವೆ. ಯುವ ಪೀಳಿಗೆಯಲ್ಲಿ ಗೂಡುದೀಪಗಳನ್ನು ಹಾಕುವ ಸಂಪ್ರದಾಯ ರೂಢಿಸಬೇಕೆಂಬ ನಿಟ್ಟಿನಲ್ಲಿ ವಾಹಿನಿಯಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗುತ್ತೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುತ್ತದೆ.
ಈ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡಿನಿಂದ ಸಾವಿರಾರು ಸ್ಪರ್ಧಾಳುಗಳು ಭಾಗಿಯಾಗಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ. ಈ ಗೂಡುದೀಪಗಳನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ.
