– ನಿನ್ನೆಯಷ್ಟೇ ಭಾರತದ 25% ಸುಂಕ ಘೋಷಿಸಿದ್ದ ಟ್ರಂಪ್
ವಾಷಿಂಗ್ಟನ್: ಆಗಸ್ಟ್ 7ರಿಂದ ಅನ್ವಯವಾಗುವಂತೆ ಭಾರತ ಸೇರಿ 69 ದೇಶಗಳಿಗೆ ಟ್ರಂಪ್ (Donald Trump) ಹೊಸ ಸುಂಕ ವಿಧಿಸಿದ್ದಾರೆ. ಈ ಬೆನ್ನಲ್ಲೇ ಭಾರತ (India), ರಷ್ಯಾದಿಂದ (Russia) ಕಚ್ಚಾ ತೈಲ ಖರೀದಿಸುವುದನ್ನೇ ನಿಲ್ಲಿಸಬಹುದು ಎನ್ನುವ ವದಂತಿಗಳು ವರದಿಯಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದನ್ನ ಸ್ವಾಗತಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಭಾರತ ಇನ್ಮುಂದೆ ತೈಲ (Crude Oil) ಖರೀದಿಸುವುದಿಲ್ಲ ಎಂದು ನನಗೆ ಅರ್ಥವಾಗಿದೆ. ಇದು ಒಳ್ಳೆಯ ಹೆಜ್ಜೆ ಎಂದು ಹೇಳಿದ್ದಾರಲ್ಲದೇ ಈ ಸುದ್ದಿ ಎಷ್ಟು ನಿಖರವಾಗಿದೆ ಅನ್ನೋದ್ರ ಬಗ್ಗೆ ನಮ್ಮ ಬಳಿ ಸರಿಯಾದ ಮಾಹಿತಿ ಇಲ್ಲ ಎಂದು ಟ್ರಂಪ್ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: 69 ದೇಶಗಳಿಗೆ ಸುಂಕದ ಬರೆ – ಭಾರತಕ್ಕೆ 25%, ಪಾಕಿಸ್ತಾನಕ್ಕೆ 19% ಸುಂಕ ವಿಧಿಸಿದ ಟ್ರಂಪ್
#WATCH | “I understand that India is no longer going to be buying oil from Russia. That’s what I heard, I don’t know if that’s right or not. That is a good step. We will see what happens…” says, US President Donald Trump on a question by ANI, if he had a number in mind for the… pic.twitter.com/qAbGUkpE12
— ANI (@ANI) August 1, 2025
ಭಾರತಕ್ಕೆ ದಂಡ ವಿಧಿಸಲು ಅಥವಾ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಲು ಯಾವ ಯೋಜನೆ ಹಾಕಿಕೊಂಡಿದ್ದೀರಿ? ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಅಂತ ನಾನು ಕೇಳಿದ್ದೇನೆ. ಆದ್ರೆ ಅದು ನಿಜವೋ, ಸುಳ್ಳೋ ನನಗೆ ತಿಳಿದಿಲ್ಲ. ಒಂದು ವೇಳೆ ಅದು ನಿಜವಾದಲ್ಲಿ ಒಳ್ಳೆಯ ಹೆಜ್ಜೆ. ಮುಂದೆ ಏನಾಗುತ್ತದೆ ಕಾದು ನೋಡೋಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತದ್ದು ಸತ್ತೋದ ಆರ್ಥಿಕತೆ – ಹೀನ ಪದ ಬಳಸಿದ ಟ್ರಂಪ್
ಭಾರತವು ವಿಶ್ವದ 3ನೇ ಅತಿದೊಡ್ಡ ತೈಲ ಆಮದುದಾರ ರಾಷ್ಟ್ರವಾಗಿದೆ. 2022ರಿಂದ ಪಾಶ್ಚಿಮಾತ್ಯ ನಿರ್ಬಂಧಗಳ ನಂತರ ರಿಯಾಯಿತಿ ದರದಲ್ಲಿ ರಷ್ಯಾದಿಂದ ತೈಲ ಖರೀದಿಸುತ್ತಿದೆ. ಆದ್ರೆ ಇತ್ತೀಚಿನ ಕೆಲ ವರದಿಗಳ ಪ್ರಕಾರ, ಭಾರತದ ಸರ್ಕಾರಿ ತೈಲ ಕಂಪನಿಗಳು ರಷ್ಯಾದಿಂದ ತೈಲ ಖರೀದಿಸುವುದನ್ನೇ ನಿಲ್ಲಿಸಿವೆ. ರಷ್ಯಾ ನೀಡುತ್ತಿದ್ದ ರಿಯಾಯಿತಿಗಳಲ್ಲಿ ಕಡಿತಗೊಂಡಿರುವುದು ಹಾಗೂ ಸರಕು ಸಾಗಣೆಗೆ ಎದುರಾಗಿರುವ ಸಮಸ್ಯೆಗಳೇ ಕಾರಣ ಎನ್ನಲಾಗಿದೆ. ಈ ಕಾರಣದಿಂದ ಭಾರತ ತೈಲ ಖರೀದಿಯನ್ನ ಸದ್ಯಕ್ಕೆ ನಿಲ್ಲಿಸಿವೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಎಫ್-35 ಖರೀದಿಸಲ್ಲ ಎಂದ ಭಾರತ – ತೆರಿಗೆ ಸಮರ ಆರಂಭಿಸಿದ ಟ್ರಂಪ್‌ಗೆ ಶಾಕ್
ಭಾರತದ ಮೇಲೆ 25% ಸುಂಕಾಸ್ತ್ರ:
ಒಂದು ದಿನದ ಹಿಂದೆಯಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಸೇರಿ 69 ದೇಶಗಳಿಗೆ ಸುಂಕ ವಿಧಿಸುವ ಹೊಸ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದರು. 69 ವ್ಯಾಪಾರ ಪಾಲುದಾರ (Trading Partners) ದೇಶಗಳ ಮೇಲೆ 10% ರಿಂದ 41% ರಷ್ಟು ಹೆಚ್ಚಿನ ಆಮದು ಸುಂಕ ವಿಧಿಸಿದ್ದು, ಇದು 7 ದಿನಗಳಲ್ಲಿ ಜಾರಿಗೆ ಬರುವುದಾಗಿ ತಿಳಿಸಿದ್ದರು. ಈ ಆದೇಶದ ಅಡಿಯಲ್ಲಿ, ಭಾರತದ ಮೇಲೆ 25% ಸುಂಕ, ಪಾಕಿಸ್ತಾನದ ಮೇಲೆ 19% ಸುಂಕ ವಿಧಿಸಿದ್ದಾರೆ.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಭಾರತ ಮತ್ತು ರಷ್ಯಾ ನಡುವಿನ ಸಂಬಂಧವು ದೀರ್ಘಕಾಲದವರೆಗೆ ಸ್ಥಿರವಾಗಿದೆ. ಪ್ರಸ್ತುತ ಉದ್ವಿಗ್ನತೆಯ ಹೊರತಾಗಿಯೂ, ಎರಡೂ ದೇಶಗಳ ನಡುವಿನ ಸಂಬಂಧ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಹಾರ ಸರ್ಕಾರದಿಂದ ಬಂಪರ್ ಗಿಫ್ಟ್ – ಬಿಸಿಯೂಟ ತಯಾರಕರು, ದೈಹಿಕ, ಆರೋಗ್ಯ ಶಿಕ್ಷಕರ ಗೌರವಧನ ಡಬಲ್