– ಚಿಕ್ಕಬಳ್ಳಾಪುರ, ರಾಮನಗರದಲ್ಲಿ ಬೆಂಕಿ ಹಚ್ಚಿ ಕಿಡಿ
– ಅತ್ತಿಬೆಲೆಯಲ್ಲಿ ತಮಿಳುನಾಡು ಬಸ್‍ಗೆ ತಡೆ
– ದಕ್ಷಿಣ ಕನ್ನಡದಲ್ಲಿ ಬಂದ್ ಇಲ್ಲ
ಕೋಲಾರ: ವಿವಿಧ ಬೇಡಿಕೆಗಳ ಈಡೆರಿಕೆಗೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ನೀಡಿರುವ ಬಂದ್ ಗೆ ಕೋಲಾರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆ 5 ಗಂಟೆಯಿಂದಲೆ ಹೋರಾಟಗಾರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ವಿವಿಧ ಸಂಘಟನೆಗಳ ಮುಖಂಡರು ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಟೈರ್‍ಗಳಿಗೆ ಬೆಂಕಿ ಹಚ್ಚಿ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಸ್‍ಗಳ ಮೇಲೆ ಕಲ್ಲು ತೂರಾಟ ಮಾಡುವ ಮೂಲಕ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಳಗ್ಗಿನಿಂದಲೆ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದು, ಅಟೋ, ಬಸ್ ಸಂಚಾರ ಸಂಪೂರ್ಣ ಸ್ಥಬ್ದವಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಅದೇಶ ಹೊರಡಿಸಿದ್ದಾರೆ. ಮುನ್ನೆಚ್ಚರಿಜಾ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ.
ಈ ಮಧ್ಯೆ ತೆಲುಗು ಚಿತ್ರ ನಟ, ಎನ್‍ಟಿಆರ್ ಮೊಮ್ಮಗ ನಂದಮೂರಿ ತಾರಕ ರತ್ನ ಅವರಿಗೂ ಕರ್ನಾಟಕ ಬಂದ್ ಬಿಸಿ ತಟ್ಟಿತ್ತು. ಭಾನುವಾರದಂದು ಖಾಸಗಿ ಕಾರ್ಯಕ್ರಮದ ನಿಮಿತ್ತ ಕೋಲಾರಕ್ಕೆ ಆಗಮಿಸಿದ್ದರು. ಇಂದು ಬಂದ್ ವೇಳೆ ಕೋಲಾರದ ಶ್ರೀನಿವಾಸಪುರ ವೃತ್ತದಲ್ಲಿ ಅವರನ್ನ ತಡೆದು ಪ್ರತಿಭಟನೆ ನಡೆಸಲಾಯ್ತು. ಈ ವೇಳೆ ತಾರಕ ರತ್ನ ಅವರು ಕಾರಿಂದ ಕೆಳಗೆ ಇಳಿದು ಕರ್ನಾಟಕ ಬಂದ್ ಗೆ ನಮ್ಮ ಕುಟುಂಬದ ಬೆಂಬಲ ಇದೆ ಎಂದು ಹೇಳಿ ಚಿಕ್ಕಬಳ್ಳಾಪುರ, ಅನಂತಪುರ ಮೂಲಕ ಆಂಧ್ರಪ್ರದೇಶಕ್ಕೆ ತೆರಳಿದ್ರು.
ಚಿಕ್ಕಬಳ್ಳಾಪುರದಲ್ಲಿ ಬಂದ್ ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಶಾಶ್ವತ ನೀರಾವರಿ ಹೋರಾಟಗಾರರು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೆಳ್ಳಂಬೆಳಿಗ್ಗೆಯೇ ಪಂಜಿನ ಮೆರವಣಿಗೆ ಮೂಲಕ ಶಿಡ್ಲಘಟ್ಟ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದ ಪ್ರತಿಭಟನಕಾರರು ಬಯಲುಸೀಮೆ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡುವಂತೆ ಆಗ್ರಹಿಸಿದ್ರು.
ರಾಮನಗರದಲ್ಲಿ ಬಂದ್‍ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದೆಡೆ ಪ್ರತಿಭಟನೆಗಳು ಶುರುವಾಗಿದ್ರೆ, ಮತ್ತೊಂದೆಡೆ ಕೆಎಸ್‍ಆರ್‍ಟಿಸಿ ಬಸ್‍ಗಳು ನಿರಾತಂಕವಾಗಿ ರಸ್ತೆಗಿಳಿದಿದ್ದು, ಅಂಗಡಿ ಮುಂಗಟ್ಟುಗಳು ನಿಧಾನವಾಗಿ ತೆರೆದುಕೊಳ್ತಾ ಇವೆ. ಇನ್ನೂ ಬೆಳ್ಳಂಬೆಳಿಗ್ಗೆ ನಗರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ರು. ಇದೇ ವೇಳೆ ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆತಡೆಗೆ ಮುಂದಾದ ಪ್ರತಿಭಟನಕಾರರನ್ನು ಪೊಲೀಸರು ತಡೆದರು. ಶಾಶ್ವತ ನೀರಾವರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸದೆ ಮಲತಾಯಿ ಧೋರಣೆ ತೋರುತ್ತಿದೆ. ಕೂಡಲೇ ರಾಜ್ಯ ಸರ್ಕಾರದ ಮೇಕೆದಾಟು, ಮಹಾದಾಯಿ, ಕಳಸಾ ಬಂಡೂರಿ ನೀರಾವರಿ ಯೋಜನೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ಮದ್ಯಸ್ಥಿಕೆ ವಹಿಸಬೇಕು ಎಂದು ಸಂಘಟನೆಯ ರಾಜ್ಯಾಧ್ಯಕ್ಷ ರಮೇಶ್‍ಗೌಡ ಆಗ್ರಹಿಸಿದ್ರು.
ವಿಜಯಪುರದಲ್ಲಿ ಬಂದ್‍ಗೆ ಪೂರ್ಣ ಬೆಂಬಲ ಸಿಕ್ಕಿದೆ. ಬಸ್ ಸಂಚಾರ ಎಂದಿನಂತೆ ಪ್ರಾರಂಭವಾಗಿತ್ತು. ಆದ್ರೆ ಬಸ್ ನಿಲ್ದಾಣಕ್ಕೆ ಲಗ್ಗೆ ಇಟ್ಟ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಬಸ್ ಸಂಚಾರ ಸ್ಥಗಿತಗೊಳಿಸಿದರಲ್ಲದೆ, ನಿಲ್ದಾಣದ ಅಂಗಡಿ ಮಂಗಟ್ಟಗಳನ್ನು ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಿದರು. ನಂತರ ನಿಲ್ದಾಣದಲ್ಲೆ ಪ್ರತಿಭಟನೆ ನಡೆಸಿದರು. ಅಲ್ಲದೆ ನಗರದ ಗಾಂಧಿಚೌಕ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣ ಹಾಗೂ ತಮಿಳುನಾಡು ಗಡಿಭಾಗವಾದ ಅತ್ತಿಬೆಲೆಯಲ್ಲಿ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆನೇಕಲ್ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರಸ್ಥರು ವ್ಯಾಪಾರ ವಹಿವಾಟು ನಿಲ್ಲಿಸಿದ್ದು, ವಾಹನ ಸಂಚಾರ ವಿರಳವಾಗಿದೆ. ದಲಿತ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದ್ದು, ವಾಟಾಳ್ ನಾಗರಾಜ್ ಅಭಿಮಾನಿ ಬಳಗ ಹಾಗೂ ಪ್ರಜಾ ವಿಮೋಚನ ಚಳುವಳಿ ಸಂಘಟನೆಯ ಆದೂರು ಪ್ರಕಾಶ್ ಹಾಗೂ ವಾಟಳ್ ನಾಗರಾಜ್ ಅಭಿಮಾನಿ ಬಳಗದ ಸನಾವುಲ್ಲಾ ನೇತೃತ್ವದ ಕಾರ್ಯಕರ್ತರು ಆನೇಕಲ್ ಪಟ್ಟಣದಲ್ಲಿ ಟೈರ್‍ಗಳಿಗೆ ಬೆಂಕಿ ಹಚ್ಚಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಹಾಗೂ ತಮಿಳುನಾಡು ಗಡಿ ಭಾಗವಾದ ಅತ್ತಿಬೆಲೆಯಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುವ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಕೈಗೊಂಡಿದ್ದು, ತಮಿಳುನಾಡಿನ ಸಾರಿಗೆ ವಾಹನಗಳು ಕರ್ನಾಟಕಕ್ಕೆ ಪ್ರವೇಶಿಸದ ಕಾರಣ ಪ್ರಯಾಣಿಕರು ತಮಿಳುನಾಡು ಗಡಿ ಹಾಗೂ ಅತ್ತಿಬೆಲೆ ಭಾಗದಿಂದ ನಡೆದುಕೊಂಡು ಹೋಗಿ ಬಸ್‍ಗಳಲ್ಲಿ ಸಂಚರಿಸುವಂತಾಗಿದೆ.
ಇನ್ನು ಚಿಕ್ಕಮಗಳೂರಿನಲ್ಲಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರಿ, ಖಾಸಗಿ ಬಸ್ ಹಾಗೂ ಆಟೋ ಸಂಚಾರ ಎಂದಿನಂತಿದೆ. ಅಂಗಡಿ, ಮುಂಗಟ್ಟುಗಳು ಎಂದಿನಂತೆ ತೆರೆದಿವೆ. ಜನಜೀವನ ಸಾಮಾನ್ಯವಾಗಿದೆ. ನಗರದಲ್ಲಿ ಪ್ರತಿಭಟನೆ ನಡೆಸ್ತಿರೋ ವಿವಿಧ ಕನ್ನಡ ಪರ ಸಂಘಟನೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಐ.ಜಿ.ರಸ್ತೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಣುಕು ಶವಯಾತ್ರೆ ನಡೆಸಿದ ಕಾರ್ಯಕರ್ತರು ಮೋದಿ ಹಾಗೂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಮಡಕೆ ಹಿಡಿದು ಮೆರವಣಿಗೆಯುದ್ಧಕ್ಕೂ ಶವಗಳ ಮೇಲೆ ಮಂಡಕ್ಕಿ ತೂರುತ್ತಾ ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನೂ ಬಂದ್ ಹಿನ್ನಲೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕೊಪ್ಪಳ ಹಾಗೂ ಹುಬ್ಬಳ್ಳಿಯಲ್ಲೂ ಕೂಡ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಧಾರವಾಡದಲ್ಲಿ, ಬಾಗಲಕೋಟೆ, ತುಮಕೂರು ಹಾಗೂ ರಾಯಚೂರಿನಲ್ಲಿ ನೀರಸ ಪ್ರತಿಕ್ರಿಯೆ ಇದೆ. ಚಾಮರಾಜನಗರ, ಹಾವೇರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್‍ಗೆ ಬೆಂಬಲ ವ್ಯಕ್ತವಾಗಿಲ್ಲ.