ಬೆಂಗಳೂರು: ಸಿಲಿಕಾನ್ ಸಿಟಿ, ಕರಾವಳಿ ಜನರು ಕಾತುರದಿಂದ ಕಾಯ್ತಿದ್ದ ಆ ಕ್ಷಣ ಕೊನೆಗೂ ನನಸಾಗಿದೆ. ತುಳುನಾಡಿನ ಕಂಬಳ (Kambala) ಕಲೆಯನ್ನ ಕಣ್ತುಂಬಿಕೊಳ್ಳಲು ಕಾದಿದ್ದ ಜನರಿಗೆ ವೀಕೆಂಡ್‍ನಲ್ಲಿ ಕಂಬಳದ ಅಖಾಡ ಸಖತ್ ಮನರಂಜನೆ ನೀಡಿದೆ. ಇತಿಹಾಸದಲ್ಲಿ ಪ್ರಥಮಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿರೋ ಕಂಬಳದ ಮೊದಲ ದಿನದ ಝಲಕ್ ಅದ್ಭುತವಾಗಿತ್ತು.
Advertisement
ಹೌದು. ಒಂದೆಡೆ ಸಿಂಗಾರ ಮಾಡಿಕೊಂಡ ಕೋಣಗಳು ಕರೆಯಲ್ಲಿ ಶರವೇಗದಲ್ಲಿ ಓಡುತ್ತಿದ್ರೆ,ಮತ್ತೊಂದೆಡೆ ಓಟಗಾರರನ್ನ ಹುರಿದುಂಬಿಸ್ತಿದ್ದ ಜನರಿಂದ ಅರಮನೆ ಮೈದಾನದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಶನಿವಾರ ಬೆಳಗ್ಗೆ 10.30ಕ್ಕೆ ಕಂಬಳದ ಕರೆಗೆ ಪೂಜೆ ಸಲ್ಲಿಸಿ ದೀಪ ಬೆಳಗುವ ಮೂಲಕ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini PuneethRajkumar), ಬಿ.ಎಸ್.ಯಡಿಯೂರಪ್ಪ (BS Yediyurappa) ಸೇರಿ ಹಲವರು ಬೆಂಗಳೂರು ಕಂಬಳಕ್ಕೆ ಚಾಲನೆ ನೀಡಿದ್ರು. ಕಂಬಳಕ್ಕೆ ಚಾಲನೆ ಸಿಗ್ತಿದ್ದಂತೆ ಅಖಾಡಕ್ಕಿಳಿದ ಕೋಣಗಳು ಕರೆಯಲ್ಲಿ ನೀರು ಚಿಮ್ಮಿಸುತ್ತ ನೆರೆದಿದ್ದವರ ಹಾರ್ಟ್ ಬೀಟ್ ಹೆಚ್ಚುವಂತೆ ಮಾಡಿತ್ತು. ಕಂಬಳಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ತುಳುನಾಡಿನ ಗಂಡುಕಲೆಯನ್ನ ಸಿಲಿಕಾನ್ ಸಿಟಿಯಲ್ಲಿ ಆಯೋಜಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
Advertisement
Advertisement
ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಕಂಬಳದ ಕಂಪು, ಇಂದು ಸಿಲಿಕಾನ್ ಸಿಟಿಯಲ್ಲೂ ಪಸರಿಸೋ ಮೂಲಕ ತುಳುನಾಡಿನ ಸಾಂಪ್ರದಾಯಿಕ ಮಣ್ಣಿನ ಕಲೆಯನ್ನ ಪರಿಚಯಿಸಿತು. ಬೆಳಗ್ಗೆಯೇ ಕೋಣಗಳಿಗೆ ಸ್ನಾನ ಮಾಡಿಸಿದ ಓಟಗಾರರು ತಮ್ಮ ತಮ್ಮ ಕೋಣಗಳನ್ನ ಮುದ್ದಿನಿಂದ ಕಂಬಳದ ಕರೆಗೆ ತರುತ್ತಿದ್ರೆ, ಸುತ್ತಮುತ್ತ ನೆರೆದವರು ಕೋಣಗಳ ಆಕಾರ, ಗಂಭೀರನಡೆ,ಮಿಂಚಿನ ಓಟಕ್ಕೆ ಬೆಕ್ಕಸ ಬೆರಗಾಗಿ ನಿಂತಿದ್ರು. ವೀಕೆಂಡ್ ಮೂಡ್ ನಲ್ಲಿದ್ದ ಜನರು ಕಂಬಳವನ್ನ ಸಖತ್ ಎಂಜಾಯ್ ಮಾಡಿದರು.
Advertisement
ಕಂಬಳದ ಆವರಣದಲ್ಲಿ ತುಳುನಾಡಿನ ಕಲೆಗಳ ಪ್ರದರ್ಶನ ಕಣ್ಣು ಕುಕ್ಕಿದ್ರೆ, ತುಳುನಾಡಿನ ಸಂಸ್ಕøತಿಯನ್ನ ಬಿಂಬಿಸುವ ದೃಶ್ಯಗಳು, ವಸ್ತು ಪ್ರದರ್ಶನಗಳು ಜನರ ಗಮನಸೆಳೆಯಿತು. ಕಂಬಳದ ಜೊತೆ ಜೊತೆಗೆ ತುಳುನಾಡಿನ ಬಗೆ ಬಗೆಯ ಖಾದ್ಯಗಳು ಜನರ ನಾಲಿಗೆ ತಣಿಸಿದ್ರೆ, ಹಬ್ಬದ ವಾತಾವರಣ, ಕಣ್ಣುಗಳಿಗೆ ಹಬ್ಬ ಉಂಟುಮಾಡಿತ್ತು. ಇದರ ಜೊತೆಗೆ ಕರಾವಳಿಯ ಕಲೆಗಳ ಸಾಂಸ್ಕೃತಿಕ ಕಾರ್ಯಕ್ರಮವೂ ಸಹ ಈ ಕಂಬಳದಲ್ಲಿದ್ದು, ಹುಲಿ ಕುಣಿತ ಸೇರಿದಂತೆ ಕರಾವಳಿಯ ಜನಪದ ಕಲೆಗಳ ಅನಾವರಣಕ್ಕೆ ವೇದಿಕೆ ಸಜ್ಜಾಗಿತ್ತು.
ಸದ್ಯ ಮೊದಲ ದಿನದ ಕಂಬಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿಲಿಕಾನ್ ಸಿಟಿ ಜನರು ಕರಾವಳಿಯ ಕಂಬಳವನ್ನ ಸಖತ್ ಎಂಜಾಯ್ ಮಾಡಿದ್ದಾರೆ.ನಾಳೆ ಕೂಡ ಕಂಬಳದ ಕಂಪು ಹರಡಲಿದ್ದು, ಹಲವು ಸೆಲೆಬ್ರೆಟಿಗಳು ಭಾಗಿಯಾಗೋ ನಿರೀಕ್ಷೆಯಿದೆ. ಒಟ್ಟಿನಲ್ಲಿ ತುಳುನಾಡಿನ ಕಂಬಳದ ಕಲರವ ಜೋರಾಗಿದ್ದು,ನಾಳೆ ವೀಕೆಂಡ್ ಇರೋದರಿಂದ ಮತ್ತಷ್ಟು ಜನರು ಕಂಬಳದ ಕಂಪು ಕಣ್ತುಂಬಿಕೊಳ್ಳೋ ಸಾಧ್ಯತೆ ಇದೆ.