ಬೆಂಗಳೂರು: ರಾಜ್ಯದಲ್ಲಿ ಮಳೆಯ ಸಿಂಚನ ಆರಂಭವಾಗಿದ್ದು, ಮಳೆಗೆ ಕಾಯುತ್ತಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಮೋಡ ಕವಿದ ವಾತವಾರಣವಿದ್ದು ಮಳೆ ಆರಂಭವಾಗಿದೆ.
ಬೆಳಗಾವಿ, ಬೀದರ್, ಹಾಸನ, ಕೊಡಗು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಿಗೆ ವರುಣದೇವ ಕೃಪೆ ತೋರಿದ್ದಾನೆ. ಬಿತ್ತನೆ ಮಾಡಿಕೊಂಡಿದ್ದ ರೈತರು ಮುಂಗಾರು ಆರಂಭವಾದ್ರೂ ಮಳೆಯ ಬರದೇ ಇದ್ದಿದ್ದರಿಂದ ಆತಂಕಗೊಂಡಿದ್ದರು. ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಕಣಕುಂಬಿಯಲ್ಲಿ ಭಾರೀ ಮಳೆಯಾಗಿದ್ದು, ಮಾವುಲಿ ಗ್ರಾಮದ ದೇವಸ್ಥಾನದ ಎದುರಿನ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಇದೇ ವೇಳೆ ಟ್ರ್ಯಾಕ್ಸ್ ವಾಹನವೊಂದು ಕೊಚ್ಚಿ ಹೋಗಿದೆ.
ಹಾಸನ ಜಿಲ್ಲೆಯಲ್ಲೂ ಮಳೆಯ ಅಬ್ಬರ ಬಿರುಸುಗೊಂಡಿದ್ದು, ಹೇಮಾವತಿ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಧಿಗೆ ಡ್ಯಾಂ ಅರ್ಧದಷ್ಟು ತುಂಬಿಕೊಂಡಿತ್ತು. ಆದ್ರೆ ಈ ವರ್ಷ ಕಾಲು ಭಾಗ ಸಹ ಭರ್ತಿಯಾಗಿಲ್ಲ. ಕಳೆದ ಎರಡು ದಿನಗಳಿಂದ ಚಿಕ್ಕಮಗಳೂರಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ತಾಲೂಕು ಸೇರಿದಂತೆ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್‍ಆರ್ ಪುರ ತಾಲೂಕುಗಳಲ್ಲಿ ಧಾರಕಾರವಾಗಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ತಡ ರಾತ್ರಿ ಸುರಿದ ಮಳೆ ಹಿನ್ನೆಲೆಯಲ್ಲಿ ಹಳೆ ಮನೆ ಕುಸಿದು ಯುವಕನೋರ್ವ ಸಾವನ್ನಪ್ಪಿದ್ದಾನೆ. ಮಲ್ಲಿಕಾರ್ಜುನ ಉರ್ಫ್ ಸಂತೋಷ ಮುದಕಪ್ಪ ಮಸ್ಕಿ (31) ಮೃತ ಯುವಕ. ಈ ಸಂಬಂಧ ಕಟಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.