ರಾಯಚೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿರುವ ಸಾಲಮನ್ನಾ ಜಾರಿಯಾಗುತ್ತೋ ಇಲ್ಲವೋ ಅನ್ನೋ ಅನುಮಾನದಲ್ಲಿದ್ದ ರೈತರಿಗೆ ಈಗ ಸಿಹಿ ಸುದ್ದಿಯೊಂದು ಸಿಕ್ಕಿದೆ. ಮೊದಲ ಹಂತವಾಗಿ ರಾಜ್ಯದ 57,994 ರೈತರ ವಾಣಿಜ್ಯ ಬ್ಯಾಂಕ್ ಖಾತೆಗೆ 258 ಕೋಟಿ 93 ರೂ. ಲಕ್ಷ ರೂಪಾಯಿ ಬಿಡುಗಡೆ ಮಾಡಿರುವುದಾಗಿ ಸರ್ಕಾರ ಘೋಷಿಸಿದೆ. ಮೊದಲ ಹಂತದ ಪಟ್ಟಿಯಲ್ಲಿ ರಾಯಚೂರಿಗೆ ಹೆಚ್ಚು ಹಣ ಬಿಡುಗಡೆಯಾಗಿದೆ.
ಚುನಾವಣಾ ಪೂರ್ವದಲ್ಲಿ ಸಾಲಮನ್ನಾ ಭರವಸೆ ನೀಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಸಮ್ಮಿಶ್ರ ಸರ್ಕಾರದಲ್ಲಿ ಸಾಲಮನ್ನಾ ಮಾಡೋದು ಅನುಮಾನ ಅಂತಲೇ ರೈತರು ಭಾವಿಸಿದ್ದರು. ಆದರೆ ಈಗ ಮೊದಲ ಹಂತದ ಸಾಲಮನ್ನಾ ಪಟ್ಟಿಯನ್ನ ಸರ್ಕಾರ ಸಿದ್ಧಮಾಡಿಕೊಂಡಿದೆ. ಇದರಲ್ಲಿ ರಾಯಚೂರಿಗೆ ಹೆಚ್ಚು ಹಣವನ್ನ ಬಿಡುಗಡೆ ಮಾಡಿದೆ. ಅತೀ ಹೆಚ್ಚು ರೈತರು ಸಾಲ ಮಾಡಿದ ಜಿಲ್ಲೆಗಳಲ್ಲಿ ಮೂರನೇ ಸ್ಥಾನದಲ್ಲಿದ್ದ ರಾಯಚೂರಿನ 5026 ರೈತರ ಖಾತೆಗೆ 22.30 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಸರ್ಕಾರ ಘೋಷಿಸಿದ್ದು, ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ.
Advertisement
Advertisement
ಈಗಾಗಲೇ ರೈತರ ಖಾತೆಗೆ ಪ್ರಾಯೋಗಿಕವಾಗಿ ಒಂದು ರೂಪಾಯಿ ಜಮಾ ಮಾಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಇನ್ನೂ ಕೆಲ ದಿನಗಳಲ್ಲಿ ಹಣ ರೈತರ ಖಾತೆಗೆ ಜಮಾ ಆಗಲಿದೆ. ಇನ್ನೂ ಎರಡನೇ ಸ್ಥಾನದಲ್ಲಿ ಕಲಬುರಗಿ ಜಿಲ್ಲೆಯ 4969 ರೈತರ ಖಾತೆಗೆ 21.12 ರೂ. ಕೋಟಿ ಬರಲಿದೆ ಎಂದು ರೈತ ಹುಲಿಗೆಪ್ಪ ಹೇಳಿದ್ದಾರೆ.
Advertisement
ರಾಯಚೂರು ಜಿಲ್ಲೆಯಲ್ಲಿ 1,23,470 ರೈತರು ಸಾಲ ಮಾಡಿದ್ದು, ಪಹಣಿ, ಆಧಾರ್ ಕಾರ್ಡ್, ಪಡಿತರ ಚೀಟಿ ನೀಡಿ 88 ಸಾವಿರ ರೈತರು ನೋಂದಣಿ ಆಗಿದ್ದಾರೆ. ಆದರೆ ಸರ್ಕಾರ ಈಗ ಕೇವಲ 5026 ಖಾತೆಗೆ ಹಣ ಜಮಾ ಮಾಡಲು ಮುಂದಾಗಿದೆ. ಅಲ್ಲದೆ ಸರ್ಕಾರ ಜಮಾ ಮಾಡಲು ಹೊರಟಿರುವ ಹಣ ತೀರಾ ಕಡಿಮೆ, ಅಂದರೆ ಪ್ರತಿ ಖಾತೆಗೆ ಕೇವಲ 40 ರಿಂದ 50 ಸಾವಿರ ರೂಪಾಯಿ ಮಾತ್ರ ಜಮಾ ಆಗಬಹದು ಅನ್ನೋದು ರೈತರ ಅಸಮಾಧಾನವಾಗಿದೆ. ಹೀಗಾಗಿ ಮುಖ್ಯಮಂತ್ರಿಗಳು ತಮ್ಮ ಮಾತಿನಂತೆ ಸಂಪೂರ್ಣವಾಗಿ ಸಾಲಮನ್ನಾ ಮಾಡಬೇಕು ಎಂದು ರೈತ ಮುಖಂಡ ಲಕ್ಷ್ಮಣಗೌಡ ತಿಳಿಸಿದ್ದಾರೆ.
Advertisement
ಹಂತಹಂತವಾಗಿ ಸಾಲಮನ್ನಾ ಮಾಡಲು ಸರ್ಕಾರ ಮುಂದಾಗಿದೆ ಎಂದು ಖುಷಿ ಪಡುವ ಹೊತ್ತಲ್ಲೇ ಹಲವು ಗೊಂದಲಗಳನ್ನು ಸರ್ಕಾರ ಸೃಷ್ಠಿಸಿದೆ. ಒಂದೆಡೆ ಬ್ಯಾಂಕ್‍ಗಳಿಗೆ ದಾಖಲೆಗಳನ್ನ ನೀಡಿ ಸರಿಹೊಂದದೆ ರೈತರು ಪರದಾಡುತ್ತಿದ್ದಾರೆ. ಇನ್ನೊಂದೆಡೆ ಒಂದು ಲಕ್ಷದವರೆಗೆ ಮನ್ನಾ ಮಾಡುವುದಾಗಿ ಹೇಳಿ ಈಗ ಸರ್ಕಾರ ಜಮಾ ಮಾಡಲು ಹೊರಟಿರುವ ಹಣದ ಪ್ರಮಾಣ ಕಡಿಮೆಯಿರುವುದು ಪುನಃ ಗೊಂದಲಕ್ಕೆ ಕಾರಣವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv