ಬೆಂಗಳೂರು: ರಾಜ್ಯದಲ್ಲಿ ಇನ್ಮುಂದೆ ಸರ್ಕಾರಿ ಉದ್ಯೋಗಿಗಳಿಗೆ 4ನೇ ಶನಿವಾರವೂ ಸರ್ಕಾರಿ ರಜೆ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ.
ಸರ್ಕಾರವನ್ನು ಮತ್ತೆ ಅಭಿವೃದ್ಧಿ ಹಳಿಗೆ ತರಲು ಹಾಗೂ ತಮ್ಮ ಗ್ರಾಮವಾಸ್ತವ್ಯಕ್ಕೆ ಮುಂಚೆ ಎಂಬಂತೆ ಸಿಎಂ ಕುಮಾರಸ್ವಾಮಿ ಅವರು ಇವತ್ತು ಕ್ಯಾಬಿನೆಟ್ ಸಭೆ ನಡೆಸಿದರು. ಸಭೆಯ ಬಳಿಕ ಮಾಧ್ಯಮಗಳಿಗೆ ಸಚಿವ ಕೃಷ್ಣಬೈರೇಗೌಡ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರದ ಬಗ್ಗೆ ಮಾಹಿತಿ ನೀಡಿದರು.
Advertisement
ಸಂಪುಟದ ನಿರ್ಧಾರಗಳು
17 ರಿಂದ 18 ರಾಜ್ಯಗಳು ಐದು ದಿನಗಳ ಕೆಲಸದ ದಿನಗಳನ್ನು ಪಾಲನೆ ಮಾಡುತ್ತಿವೆ. ಇನ್ನು ಕೆಲವು ರಾಜ್ಯಗಳಲ್ಲಿ ಎರಡು ಶನಿವಾರ ರಜೆ ದಿನ ನೀಡುತ್ತಿವೆ. ನಮ್ಮ ರಾಜ್ಯದಲ್ಲಿ ನಾಲ್ಕನೇ ಶನಿವಾರ ಸರ್ಕಾರಿ ರಜೆ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಇನ್ನು ಮುಂದೆ ನಾಲ್ಕನೇ ಶನಿವಾರ ಸರ್ಕಾರಿ ರಜೆ ದಿನವಾಗಿದೆ. ಆದರೆ ಸರ್ಕಾರಿ ನೌಕರರಿಗೆ ನೀಡಿದ್ದ ವರ್ಷಕ್ಕೆ 15 ದಿನಗಳ ಸಾಂದರ್ಭಿಕ ರಜೆ(ಸಿಎಲ್) 10 ದಿನಗಳಿಗೆ ಇಳಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
Advertisement
Advertisement
ಜಿಂದಾಲ್ ಸಂಸ್ಥೆಯಲ್ಲಿ ಕನ್ನಡಿಗರು ಮತ್ತು ಸ್ಥಳೀಯರಿಗೆ ಉದ್ಯೋಗ ಕೊಡುವುದನ್ನು ಖಾತ್ರಿ ಪಡಿಸಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಜಿಂದಾಲ್ ಸಂಸ್ಥೆಗೆ 3,600 ಎಕರೆ ಜಮೀನನ್ನು ಲೀಸ್ ಕಂ ಸೇಲ್ ಡೀಡ್ ಮಾಡಿಕೊಡಬೇಕು ಎಂದು 2006ರಲ್ಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದದ ಮೇರೆಗೆ ಜಿಂದಾಲ್ ಸಂಸ್ಥೆ ಕರಾರು ಒಪ್ಪಂದದ ಷರತ್ತುಗಳನ್ನು ಪೂರ್ಣಗೊಳಿಸಿರುವ ಕಾರಣ ಅನಿವಾರ್ಯವಾಗಿ ಭೂಮಿ ಕ್ರಯ ಮಾಡಿಕೊಡಲಾಗುತ್ತಿದೆ ಎಂದು ಸಚಿವರು ಸ್ಪಷ್ಟನೆ ಕೊಟ್ಟರು.
Advertisement
ಗ್ರೂಪ್ ಸಿ ಮತ್ತು ಡಿ ನೌಕಕರ ವರ್ಗಾವಣೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ತೀರ್ಮಾನ ಮಾಡಿದ್ದು. ಅದಕ್ಕಾಗಿ ಕರಡು ಕಾನೂನು ಜಾರಿಗೆ ತರಲು ಸಂಪುಟ ನಿರ್ಧಾರ ಮಾಡಿದೆ. ಈ ಕಾನೂನು ಬರುವ ಅಧಿವೇಶನದಲ್ಲಿ ಜಾರಿಗೆ ಮಾಡಿ ಸಿಇಟಿ ಮಾದರಿಯಲ್ಲೇ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲಾಗುತ್ತದೆ. ಆದರೆ ಸಿ ಗ್ರೂಪ್‍ಗೆ 5 ವರ್ಷ ಡಿ ಗ್ರೂಪ್‍ಗೆ 7 ವರ್ಷ ಕನಿಷ್ಠ ವರದಿ ನಿಗದಿ ಮಾಡಲಾಗಿದೆ. ಬೀದರ್, ಕಲಬುರ್ಗಿ, ಯಾದಗಿರಿ, ಉತ್ತರ ಕನ್ನಡ, ಕೊಡಗು, ಉಡುಪಿ, ಮಂಗಳೂರು ಜಿಲ್ಲೆಗಳಲ್ಲಿ ಖಾಲಿ ಹುದ್ದೆಗಳಿದ್ದು, ಖಾಲಿ ಇರುವ ಎಲ್ಲ ಜಿಲ್ಲೆಗಳಿಗೂ ನೌಕರರನ್ನು ನೇಮಕಾತಿ ಮಾಡಲು ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 16 ಸಾವಿರ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣ ಮಾಡಿ ಅವುಗಳ ನಿರ್ವಹಣೆ ಮಾಡಲು ಗ್ರಾಮ ಪಂಚಾಯತ್‍ಗಳಿಗೆ ವಹಿಸಲಾಗಿತ್ತು. ಆದರೆ ಗ್ರಾಮ ಪಂಚಾಯತ್‍ಗಳು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಆದರ ಮೇಲೆ ಆರೋಪಗಳು ಬಂದಿವೆ. ಹೀಗಾಗಿ ಮಾರ್ಗಸೂಚಿ ಸಿದ್ದಪಡಿಸಿ, ನಿರ್ವಹಣೆ ಮಾಡಲು ಟೆಂಡರ್ ಮೂಲಕ ಖಾಸಗಿಯವರಿಗೆ ಹೊರಗುತ್ತಿಗೆ ನೀಡಲು ನಿರ್ಧಾರ ಮಾಡಲಾಗಿದೆ. ಶುದ್ಧಕುಡಿಯುವ ನೀರಿನ ಘಟಕಗಳಲ್ಲಿ ಕಾಯಿನ್‍ನಿಂದ ಸ್ಮಾರ್ಟ್ ಕಾರ್ಡ್‍ಗೆ ಮಾರ್ಪಾಡು ಮಾಡಲು ತೀರ್ಮಾನ ಮಾಡಲಾಗಿದೆ. ಘಟಕದ ರಿಪೇರಿಗೆ ಸರಾಸರಿ 3 ಸಾವಿರ ನೀಡಲು ಒಪ್ಪಿಗೆ ನೀಡಿದ್ದು 5 ವರ್ಷಕ್ಕೆ 233 ಕೋಟಿ ಅನುದಾನ ಇದಕ್ಕಾಗಿ ನೀಡಲಾಗಿದೆ ಎಂದು ವಿವರಿಸಿದರು.
ಕೆಪಿಎಸ್ಸಿ 1998 ಗೆಜೆಟೆಡ್ ಪ್ರೊಬೆಷನರಿ ನೇಮಕ ವಿವಾದ ಬಗ್ಗೆ ಕ್ಯಾಬಿನೆಟ್‍ನಲ್ಲಿ ಚರ್ಚೆ ಮಾಡಿದ್ದು, ಅಧಿಕಾರ ಪಡೆದವರು, ವಂಚಿತರು ಇಬ್ಬರಿಗೂ ಅನ್ಯಾಯವಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಇದರ ಬಗ್ಗೆ ಕಳೆದ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಆದರೆ ಆ ತೀರ್ಮಾನದ ವಿರುದ್ಧ 1999, 2004 ರಲ್ಲಿ ಪ್ರಮೋಷನ್ ಆದವರು ದೂರು ನೀಡಿದ್ದರು. ಹೀಗಾಗಿ ಅವರಿಗೂ ತೊಂದರೆಯಾಗದಂತೆ ಅನುಷ್ಠಾನದ ವೇಳೆ ಭರ್ತಿ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆಲ ಭಾಗಕ್ಕೆ ಅಂತರ್ಜಲಮಟ್ಟ ಹೆಚ್ಚಳಕ್ಕೆ ಬೆಂಗಳೂರು ತ್ಯಾಜ್ಯ ಸಂಸ್ಕರಣ ನೀರು ಮೂಲಕ ಕೆರೆ ತುಂಬಿಸುವ ಮೊದಲನೇ ಹಂತದಲ್ಲಿ 20 ಕೆರೆಗಳು ತುಂಬಿವೆ. ಈಗ ಎರಡನೇ ಹಂತದ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದ್ದು ಟೆಂಡರ್ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಬೆಂಗಳೂರಿನಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ತ್ಯಾಜ್ಯ ಸಂಸ್ಕರಣ ನೀರು ಹರಿಸುವ ಎರಡನೇ ಹಂತದ ಯೋಜನೆಗೆ 455 ಕೋಟಿ ರೂನ್ನು ಬಿಡುಗಡೆ ಮಾಡಲು ಸಂಪುಟ ಒಪ್ಪಿಗೆ ಸೂಚಿಸಿದೆ ಎಂದರು.
ಈ ಸಚಿವ ಸಂಪುಟ ಸಭೆಯಲ್ಲಿ ಸಚಿವಾಲಯದ ವರ್ಗಾವಣೆ ಬಗ್ಗೆ ಚರ್ಚೆಯಾಗಿಲ್ಲ. ಏಕೆಂದರೆ ಆದಕ್ಕೆ ಪ್ರತ್ಯೇಕ ನಿಯಮಾವಳಿಗಳಿವೆ ಇಲ್ಲೇ ಭರ್ತಿಯಾಗುತ್ತದೆ ಮತ್ತು ಇಲ್ಲೇ ವರ್ಗಾವಣೆಯಾಗಲಿದೆ. ಚರ್ಚೆಯಾಗುವುದಕ್ಕೆ ಮುಕ್ತ ಅವಕಾಶವಿದೆ ಆದ್ದರಿಂದ ಚರ್ಚೆಯಾಗಿಲ್ಲ. ಕೊಪ್ಪಳ ಮೆಡಿಕಲ್ ಕಾಲೇಜಿಗೆ 450 ಹೆಚ್ಚುವರಿ ಹಾಸಿಗೆ ನಿರ್ಮಾಣಕ್ಕೆ ಈ ಹಿಂದೆ ಒಪ್ಪಿಗೆ ನೀಡಲಾಗಿತ್ತು. ಈ ಹಿಂದೆ ನೀಡಿದ್ದ 90 ಕೋಟಿ ಕಾಮಗಾರಿ ಜೊತೆಗೆ ಹೆಚ್ಚುವರಿ 14 ಕೋಟಿ ರೂ. ಕಾಮಗಾರಿಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.