– ಜಿಲ್ಲೆಯ 32 ಸ್ಥಳಗಳಲ್ಲಿ ಚಾರಣಕ್ಕೆ ಅವಕಾಶ ಕಲ್ಪಿಸಲು ಸಿದ್ಧತೆ
ಕಾರವಾರ: ರಾಜ್ಯದಲ್ಲಿ ಅನೇಕ ಸುಂದರ ತಾಣಗಳಿವೆ. ಆದರೆ, ಸುರಕ್ಷತೆಯ ದೃಷ್ಟಿಯಿಂದ ವಿಧಿಸಲಾಗಿರುವ ನಿರ್ಬಂಧಗಳಿಂದ ಆಕರ್ಷಣಿಯ ನೈಸರ್ಗಿಕ ಸ್ಥಳಗಳನ್ನು ನೋಡಲಾಗದ ಪರಿಸ್ಥಿತಿ ಇದೆ. ಇಂತಹ ನಿರ್ಬಂಧಗಳಿಗೆ ಕೊಂಚ ಬ್ರೇಕ್ ಹಾಕಿ, ಚಾರಣ ಪ್ರಿಯರಿಗೆ ಹೊಸ ಸ್ಥಳಗಳಿಗೆ ಅವಕಾಶ ಕಲ್ಪಿಸಲು ಉತ್ತರ ಕನ್ನಡ ಜಿಲ್ಲಾಡಳಿತ ಮುಂದಾಗಿದೆ.
ಕರ್ನಾಟಕದ ಕಾಶ್ಮೀರ ಎಂದೇ ಹೆಸರು ಪಡೆದ ಉತ್ತರ ಕನ್ನಡ ಜಿಲ್ಲೆ ಸುಂದರ ಬೆಟ್ಟ ಗುಡ್ಡಗಳು, ಕಡಲತೀರಗಳನ್ನು ಹೊಂದಿದ ನಾಡು. ರಾಜ್ಯದಲ್ಲೇ ಅತೀ ಹೆಚ್ಚು ಪರಿಸರ ಸೌಂದರ್ಯ ಹೊಂದಿದ ಜಿಲ್ಲೆ ಕೂಡ. ದೇಶದ ಯಾವ ಮೂಲೆಯಲ್ಲೂ ಕಾಣದ ಸುಂದರ, ಸುರಕ್ಷಿತ ಮತ್ತು ಸಮೃದ್ಧವಾದ ನೈಸರ್ಗಿಕ ತಾಣಗಳು ಈ ಜಿಲ್ಲೆಯಲ್ಲಿವೆ. ಆದರೂ ಹೊರ ರಾಜ್ಯ ಹಾಗೂ ಹೊರ ದೇಶದಲ್ಲಿ ಚಾರಣಕ್ಕೆ ಹೋಗುವ ಅದೆಷ್ಟೋ ಕನ್ನಡಿಗರಿಗೆ ಉತ್ತರ ಕನ್ನಡ ಜಿಲ್ಲೆಯ ಆಕರ್ಷಣೀಯ ಸುಂದರ ಸ್ಥಳಗಳಲ್ಲಿ ಟ್ರಕ್ಕಿಂಗ್ ಮಾಡಲು ಅವಕಾಶ ಸಿಕ್ಕಿಲ್ಲ ಎಂಬ ಅಳಲು ಇತ್ತು. ಟ್ರಕ್ಕಿಂಗ್ ಪ್ರಿಯರಿಗೆ ಅಧಿಕೃತವಾಗಿ ಅವಕಾಶ ಕಲ್ಪಿಸಿ ಕೊಡುವ ಉದ್ದೇಶದಿಂದ ಕಳೆದ ಕೆಲವು ತಿಂಗಳ ಕಾಲ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಸುತ್ತಾಡಿ ಸರ್ವೇ ಮಾಡಿರುವ ಉತ್ತರ ಕನ್ನಡ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಹಾಗೂ ತಂಡ ಸುಮಾರು ಜಿಲ್ಲೆಯ 32 ಸ್ಥಳಗಳು ಚಾರಣ ಮಾಡಲು ಸೂಕ್ತ ಎಂದು ಗುರುತಿಸಿದೆ.
ಸದ್ಯ ಚಾರಣಕ್ಕೆ ಜಿಲ್ಲಾಡಳಿತದಿಂದ ಬೆಂಬಲ ಸಿಕ್ಕಿರುವ ಹಿನ್ನೆಲೆಯಲ್ಲಿ 32 ಸ್ಥಳಗಳಲ್ಲಿ ಟ್ರಕ್ಕಿಂಗ್ ಮಾಡಲು ಅಧಿಕೃತ ಅನುಮತಿಗಾಗಿ ಕರ್ನಾಟಕ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಮೀನಾಕ್ಷಿ ನೆಗಿಗೆ ಉತ್ತರ ಕನ್ನಡ ಸಿ.ಸಿ.ಎಫ್ ವಸಂತ ರೆಡ್ಡಿ ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ಅನುಮತಿ ಸಿಕ್ಕಿದ್ದೇ ಆದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಒಂದು ಹೊಸ ಆಯಾಮ ಬರುವುದರ ಜೊತೆಗೆ ಜಿಲ್ಲೆ ಟ್ರಕ್ಕಿಂಗ್ ಹಬ್ ಆಗಲಿದೆ.
32 ಟ್ರಕ್ಕಿಂಗ್ ಸ್ಥಳಗಳಿಗೆ ಉತ್ತರ ಕನ್ನಡ ಜಿಲ್ಲಾಡಳಿತ ಅನುಮತಿ ನೀಡಿರುವುದನ್ನ ಸ್ವಾಗತಿಸಿರುವ ಪರಿಸರ ಪ್ರೇಮಿಗಳು ಟ್ರಕ್ಕಿಂಗ್‌ಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿರುವುದು ನಿಸರ್ಗ ಪ್ರಿಯರು ಹಾಗೂ ಅಧ್ಯಯನ ಮಾಡುವವರಿಗೆ ನಿಜಕ್ಕೂ ಪ್ರೇರಣೆ ಕೊಟ್ಟಂತಾಗುತ್ತದೆ. ಆದರೆ, ಟ್ರಕ್ಕಿಂಗ್ ಸಂಪೂರ್ಣವಾಗಿ ಅರಣ್ಯ ಇಲಾಖೆಯವರ ಮೂಲಕವೇ ನಡೆಯಬೇಕು ಎಂದಿರುವ ಪರಿಸರ ಪ್ರೇಮಿಗಳು, ಟ್ರಕ್ಕಿಂಗ್ ಸ್ಥಳಗಳ ಸುರಕ್ಷತೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡುವುದರ ಜೊತೆಗೆ ಮೋಜು ಮಸ್ತಿ ಹಾಗೂ ಅನೈತಿಕ ಚಟುವಟಿಕೆಗಳ ಮೇಲೆ ಸಂಪೂರ್ಣವಾಗಿ ನಿಗಾವಹಿಸಬೇಕೆಂದು ಆಗ್ರಹ ಮಾಡಿದ್ದಾರೆ.
ಕಾಳಿ ಟೈಗರ್ ರಿಸರ್ವ್ ಫಾರೆಸ್ಟ್ ಪ್ರದೇಶದಲ್ಲಿನ ಸುಮಾರು 39 ಪ್ರದೇಶಗಳಲ್ಲಿ ಟ್ರಕ್ಕಿಂಗ್‌ಗೆ ಅವಕಾಶ ಕಲ್ಪಿಸುವಂತೆ ಅರಣ್ಯ ಅಧಿಕಾರಿಗಳು ಮನವಿ ಮಾಡಿದ್ದರು. ಆದರೆ, ಅದಕ್ಕೆ ಒಪ್ಪಿಗೆ ಸಿಕ್ಕಿಲ್ಲ. ಈ 32 ಸ್ಥಳಗಳಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿದ್ದು, ಒಂದುವೇಳೆ ಅವಕಾಶ ಸಿಕ್ಕಲ್ಲಿ ಚಾರಣಿಗರಿಗೆ ವಿಶೇಷ ಸ್ಥಳಗಳ ಪರಿಚಯದ ಜೊತೆಗೆ ಜಿಲ್ಲಾ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ.