ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್!

Public TV
2 Min Read
BMTC KSRTC

ಬೆಂಗಳೂರು: ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕೇಂದ್ರ ಸರ್ಕಾರ ಪ್ರತಿ ಲೀಟರ್ ಡೀಸೆಲ್ ಮೇಲೆ 2.50 ರೂಪಾಯಿ ಇಳಿಸಿದ ಪರಿಣಾಮ ಸದ್ಯಕ್ಕೆ ಕೆಎಸ್‍ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳ ಅನುಮಾನವಾಗಿದೆ.

ಈಗಾಗಲೇ ಕುಮಾರಸ್ವಾಮಿ ಸರ್ಕಾರ ತೈಲ ಬೆಲೆ ಇಳಿಸದೆ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಈಗ ಪ್ರಯಾಣ ದರ ಹೆಚ್ಚಿಸಿದರೆ ಮತ್ತೆ ಜನರ ಆಕ್ರೋಶಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರ ಹೆಚ್ಚಳ ಮಾಡದೇ ಇರಲು ಸರ್ಕಾರದ ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ.

KSRTC 2

ಸಾರಿಗೆ ಇಲಾಖೆಗೆ ನಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಶೇ.14ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಸರ್ಕಾರ ಸಿದ್ಧತೆ ನಡೆಸಿತ್ತು. ಈ ಹಿಂದೆ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಅವರು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದಾಗ ತೈಲ ಬೆಲೆ ಹೆಚ್ಚಳದಿಂದ ಬಸ್ ಪ್ರಯಾಣ ಟಿಕೆಟ್ ದರ ಹೆಚ್ಚಿಸುವುದು ಅನಿವಾರ್ಯ ಎಂದಿದ್ದರು. ಈಗ ಕೇಂದ್ರ ಸರ್ಕಾರ 2.5 ರೂ. ತೈಲ ಬೆಲೆಯನ್ನು ಇಳಿಕೆ ಮಾಡಿದೆ. ಇದರಿಂದ ಬಸ್ ಟಿಕೆಟ್ ದರವನ್ನು ಹೆಚ್ಚಳ ಮಾಡಬೇಕೇ? ಬೇಡವೇ ಎನ್ನುವ ಗೊಂದಲದಲ್ಲಿ ಸಾರಿಗೆ ಇಲಾಖೆ ಇದೆ.

ದೆಹಲಿಯಿಂದ ಸಿಎಂ ಕುಮಾರಸ್ವಾಮಿ ವಾಪಸ್ ಬಂದ ಮೇಲೆ ಅವರ ಜೊತೆ ಸಾರಿಗೆ ಸಚಿವರ ಸಭೆ ನಡೆಸಲಿದ್ದಾರೆ. ಸಭೆ ಬಳಿಕ ಟಿಕೆಟ್ ಹೆಚ್ಚಳದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಆದ್ದರಿಂದ ಸದ್ಯಕ್ಕೆ ಟಿಕೆಟ್ ದರ ಹೆಚ್ಚಳ ಸಾಧ್ಯತೆ ಕಡಿಮೆ ಇದೆ ಎಂದು ಸಾರಿಗೆ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

BMTC KSRTC STRIKE 1

ಅಬಕಾರಿ ಸುಂಕವನ್ನು 1.50 ರೂಪಾಯಿ ಕಡಿಮೆ ಮಾಡಿದ್ದು, ತೈಲ ಕಂಪನಿಗಳು 1 ರೂಪಾಯಿ ಕಡಿಮೆ ಮಾಡಲು ನಿರ್ಧರಿಸಿದೆ. ಹೀಗಾಗಿ ಒಟ್ಟು 2.50 ರೂ ಕಡಿತವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ತೈಲ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಹಣಕಾಸು ಇಲಾಖೆಯ ಜೊತೆ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಪರಿಣಾಮ ಸರ್ಕಾರಕ್ಕೆ 10,500 ಕೋಟಿ ರೂ. ಹೊರೆಯಾಗುತ್ತದೆ. ಕೇಂದ್ರ ಸರ್ಕಾರ ಕಡಿಮೆ ಮಾಡಿದಂತೆ ರಾಜ್ಯ ಸರ್ಕಾರಗಳು ವ್ಯಾಟ್ ತೆರಿಗೆಯನ್ನು ಕಡಿತಗೊಳಿಸಲಿ ಎಂದು ಸಲಹೆ ನೀಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *