ಕಲಬುರಗಿ: ಅಲ್ಪಸಂಖ್ಯಾತ ಬಡ ಜನರ ಕಾರ್ಯಕ್ರಮ ನಡೆಸಲು ಸರ್ಕಾರ ಶಾದಿ ಮಹಲ್ ಎಂಬ ಯೋಜನೆ ಜಾರಿಗೆ ತಂದಿದೆ. ಆದರೆ ಕಲಬುರಗಿಯಲ್ಲಿ ಭ್ರಷ್ಟ ಅಧಿಕಾರಿಯೊಬ್ಬ ಈ ಯೋಜನೆಯಲ್ಲಿ ಗೋಲ್ಮಾಲ್ ನಡೆಸಿ ಸಿಕ್ಕಿ ಬಿದಿದ್ದಾನೆ. ದುರಂತ ಅಂದರೆ ಆ ಭ್ರಷ್ಟ ಅಧಿಕಾರಿಯ ಪರ ಸಚಿವ ಜಮೀರ್ ಅಹ್ಮದ್ ಲಾಬಿ ನಡೆಸುತ್ತಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಹೌದು. ಕಲಬುರಗಿಯ ಜಿಲ್ಲಾ ಅಲ್ಪಸಂಖ್ಯಾತ ಇಲಾಖೆಯ ಕಲ್ಯಾಣಾಧಿಕಾರಿಯಾಗಿ ಮೆಹಬೂಬ್ ಪಾಷಾ ಅವರು ಕಳೆದ 4 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಅವಧಿಯಲ್ಲಿ ಜಿಲ್ಲೆಗೆ ಒಟ್ಟು 30 ಕ್ಕೂ ಹೆಚ್ಚು ಶಾದಿ ಮಹಲ್‍ಗಳಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದನ್ನು ಬಂಡವಾಳ ಮಾಡಿಕೊಂಡ ಮೆಹಬೂಬ್ ಪಾಷಾ ಕಟ್ಟಡ ನಿರ್ಮಿಸದೆ ಹಣ ಲೂಟಿ ಮಾಡಿದ್ದಾನೆ. ಈ ಮೂಲಕ ಇಲ್ಲಿನ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯವನ್ನು ತನ್ನ ಲಾಭಕ್ಕೆ ಬಳಸಿಕೊಂಡಿದ್ದಾನೆ ಎಂದು ಆರ್‌ಟಿಐ ಕಾರ್ಯಕರ್ತ ಶೇಖ್ ಶಫಿ ಅಹ್ಮದ್ ಆರೋಪಿಸಿದ್ದಾರೆ.
ಮೆಹಬೂಬ್ ಪಾಷಾ ಅಕ್ರಮದ ಕುರಿತು ಎಸಿಬಿ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದೂರು ದಾಖಲಾಗಿದೆ. ಕಲಬುರಗಿ ಪ್ರಾದೇಶಿಕ ಆಯುಕ್ತರು ಅಲ್ಪಸಂಖ್ಯಾತ ಇಲಾಖೆಯ ಕಾರ್ಯದರ್ಶಿಗೂ ಪತ್ರ ಬರೆಯಲಾಗಿದೆ. ಆದರೆ ಇಂತಹ ಭ್ರಷ್ಟ ಅಧಿಕಾರಿಯನ್ನು ಇದೇ ಇಲಾಖೆಯಲ್ಲಿ ಮುಂದುವರಿಸುವಂತೆ ಸಚಿವ ಜಮೀರ್ ಅಹ್ಮದ್ ಅವರು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಈಗಾಗಲೇ ಐಎಂಎ ದೋಖಾದ ಕಿಂಗ್‍ಪಿನ್ ಜೊತೆ ನಂಟಿದೆ ಎಂದು ಜಮೀರ್ ಆರೋಪ ಎದುರಿಸುತ್ತಿದ್ದಾರೆ. ಇತ್ತ, ಕಲಬುರಗಿಯಲ್ಲಿ ಅವರದ್ದೇ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯ ವಂಚಿಸಿದ, ಭ್ರಷ್ಟ ಅಧಿಕಾರಿಯ ಬೆನ್ನಿಗೆ ಜಮೀರ್ ಅಹ್ಮದ್ ಅವರು ನಿಂತಿರುವುದು ಇಲ್ಲಿನ ಅಲ್ಪಸಂಖ್ಯಾತರ ಕೆಂಗಣ್ಣಿಗೆ ಗುರಿಯಾಗಿದೆ.