ದಾವಣಗೆರೆ: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಗೊಲ್ಲರಹಟ್ಟಿಯಲ್ಲಿನ ಕಂದಾಚಾರ ನಿರ್ಮೂಲನೆಗೆ ಶಾಸಕಿ ಪೂರ್ಣಿಮ ಅವರು ಜಾಗೃತಿ ಮೂಡಿಸಿ, ಈ ಅನಿಷ್ಟ ಪದ್ಧತಿಯ ವಿರುದ್ಧ ನಾವೆಲ್ಲರೂ ಹೋರಾಡೋಣ ಎಂದು ಕರೆ ಕೊಟ್ಟಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಗಂಗೂರು ಗ್ರಾಮದ ಗೊಲ್ಲರಹಟ್ಟಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕ ಪೂರ್ಣಿಮಾ ಅವರು ಭೇಟಿ ಕೊಟ್ಟಿದ್ದರು. ಚಿಕ್ಕಗಂಗೂರು ಗ್ರಾಮದ ಗೊಲ್ಲರಹಟ್ಟಿಗಳಲ್ಲಿ ಅದರಲ್ಲೂ ಜುಂಜಪ್ಪನ ಪೂಜೆ ಮಾಡುವ ಗೊಲ್ಲರಹಟ್ಟಿಯಲ್ಲಿ ಮುಟ್ಟಾದ ಹಾಗೂ ಹೆರಿಗೆಯಾದ ಮಹಿಳೆಯರನ್ನು ಮನೆಯಿಂದ ಹೊರಗಿಡುವುದು ವಾಡಿಕೆಯಿದೆ. ಹೀಗಾಗಿ ಇಂತಹ ಅನಿಷ್ಟ ಪದ್ಧತಿಯಿಂದ ಹೊರ ಬರಬೇಕು. ಇದರ ವಿರುದ್ಧ ಹೋರಾಟ ನಡೆಸಿ ಅನಿಷ್ಟ ಪದ್ಧತಿಯನ್ನು ತೊಲಗಿಸಬೇಕು ಎಂದು ಮಹಿಳೆಯರಲ್ಲಿ ಶಾಸಕಿ ಜಾಗೃತಿ ಮೂಡಿಸಿದರು.
ಅಲ್ಲದೇ ಪ್ರಕೃತಿದತ್ತವಾಗಿ ಮಹಿಳೆಯರು ಋತುಮತಿಯಾಗುತ್ತಾರೆ. ಇದನ್ನೇ ಇಂದು ಅನಿಷ್ಟ ಎನ್ನುವಂತೆ ಗೊಲ್ಲರಹಟ್ಟಿಗಳಲ್ಲಿ ಮಹಿಳೆಯರನ್ನು ಹೊರಗಿಟ್ಟು ಚಿತ್ರಹಿಂಸೆ ಪಡುವಂತೆ ಮಾಡಲಾಗುತ್ತಿದೆ. ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರ ಶೋಷಣೆ ಮಾಡದಂತೆ ಗೊಲ್ಲರಹಟ್ಟಿಯ ನಿವಾಸಿಗಳಿಗೆ ತಾಕೀತು ಮಾಡಿದರು. ಇನ್ನು ಮುಂದೆ ನಿಮ್ಮ ಮನೆಯಲ್ಲಿ ಹಿರಿಯರಿಗೆ ಇದರ ಬಗ್ಗೆ ಜಾಗೃತಿವಹಿಸಿ, ಮತ್ತೊಮ್ಮೆ ಇಂತಹ ಅನಿಷ್ಟ ಪದ್ಧತಿಯನ್ನು ಆಚರಣೆ ಮಾಡದಂತೆ ಗ್ರಾಮದ ಮಹಿಳೆಯರಿಗೆ ಶಾಸಕಿ ಪೂರ್ಣಿಮಾ ತಿಳಿ ಹೇಳಿದರು.