ಬೆಂಗಳೂರು: ಮುಂಗಾರುಮಳೆಯ ಮಹಾ ಗೆಲುವಿನೊಂದಿಗೆ ಗೋಲ್ಡನ್ ಸ್ಟಾರ್ ಆಗಿ ಅವತರಿಸಿರೋ ಗಣೇಶ್ ಇದುವರೆಗೂ ಹಲವಾರು ಚಿತ್ರಗಳಲ್ಲಿ ನಾನಾ ಥರದ ಪಾತ್ರಗಳನ್ನು ಮಾಡಿದ್ದಾರೆ. ಹೆಚ್ಚಾಗಿ ಲವರ್ ಬಾಯ್ ಪಾತ್ರಗಳಲ್ಲಿಯೇ ಮಿಂಚುತ್ತಾ ಬಂದಿರೋ ಗಣೇಶ್ ಗೀತಾ ಚಿತ್ರದಲ್ಲಿ ಮಾತ್ರ ಇದುವರೆಗೂ ಕಾಣಿಸಿಕೊಂಡಿರದ ಪಾತ್ರದಲ್ಲಿ, ಗೆಟಪ್ಪಿನಲ್ಲಿ ಕಾಣಿಕೊಂಡಿದ್ದಾರೆಂಬುದಕ್ಕೆ ಇತ್ತೀಚೆಗೆ ಬಿಡುಗಡೆಯಾಗಿರೋ ಟ್ರೇಲರ್ ಮತ್ತು ಹಾಡುಗಳಲ್ಲಿಯೇ ಸಾಕ್ಷ್ಯಗಳು ಸಿಕ್ಕಿವೆ. ಈ ಸಿನಿಮಾದಲ್ಲಿ ಗಣೇಶ್ ಹಾರ್ಡ್‍ಕೋರ್ ಕನ್ನಡಾಭಿಮಾನಿಯಾಗಿ, ಕನ್ನಡಪರ ಹೋರಾಟಗಾರನಾಗಿ ನಟಿಸಿದ್ದಾರೆ.
Advertisement
ಗೋಲ್ಡನ್ ಸ್ಟಾರ್ ಗಣೇಶ್ ಪಾಲಿಗೆ ಹಠಾತ್ತನೆ ಇಂಥಾದ್ದೊಂದು ರೂಪಾಂತರವನ್ನು ಕಲ್ಪಿಸಿ ಕೊಟ್ಟಿರುವವರು ನಿರ್ದೇಶಕ ವಿಜಯ್ ನಾಗೇಂದ್ರ. ಇವರ ಪಾಲಿಗಿದು ಚೊಚ್ಚಲ ಚಿತ್ರ. ಆದರೆ ಈ ಮೊದಲ ಪ್ರಯತ್ನದಲ್ಲಿಯೇ ಸವಾಲಿನಂಥಾ ಅದೆಷ್ಟೋ ಅಂಶಗಳನ್ನು ವಿಜಯ್ ಅಳವಡಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಒಂದು ಇಮೇಜಿಗೆ ಹೊಂದಿಕೊಂಡ ನಟನಟಿಯರನ್ನು ಏಕಾಏಕಿ ಬೇರೆ ಥರದ ಪಾತ್ರದಲ್ಲಿ ಕಾಣಿಸೋದು ಸವಾಲಿನ ಕೆಲಸ. ಆದರೆ ಗೋಲ್ಡನ್ ಸ್ಟಾರ್ ಎಂಥಾ ಪಾತ್ರಕ್ಕಾದರೂ ನ್ಯಾಯ ಒದಗಿಸೋ ಕಸುವಿರುವ ನಟ. ಅದಕ್ಕೆ ತಕ್ಕುದಾದ ಕಥೆ ಮತ್ತು ಪಾತ್ರವನ್ನು ವಿಜಯ್ ನಾಗೇಂದ್ರ ಸೃಷ್ಟಿಸಿದ್ದಾರೆ. ಗಣೇಶ್ ಹೋಂ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ಖ್ಯಾತ ನಿರ್ಮಾಪಕರಾದ ಸೈಯದ್ ಸಲಾಮ್ ಅವರ ಸಹಕಾರದೊಂದಿಗೆ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿದ್ದಾರೆ.
Advertisement
Advertisement
ಗಣೇಶ್ ಪಾಲಿಗಿದು ಮನ್ವಂತರದಂಥಾ ಚಿತ್ರ. ಯಾಕೆಂದರೆ, ನಿರ್ದೇಶಕರ ವಿಜಯ್ ನಾಗೇಂದ್ರ ಅವರ ಈವರೆಗಿನ ಇಮೇಜ್ ಹೊಸಾ ಥರದಲ್ಲಿ ಕಳೆಗಟ್ಟುವಂತೆ ಈ ಸಿನಿಮಾವನ್ನು ರೂಪಿಸಿದ್ದಾರೆ. ತೀರಾ ಕನ್ನಡದ ಘನತೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ನಡೆದ ಗೋಕಾಕ್ ಚಳುವಳಿಯಂಥಾ ಕಥೆಯನ್ನು ಮುಟ್ಟೋದೂ ಕೂಡಾ ಸಿನಿಮಾ ಚೌಕಟ್ಟಿನಲ್ಲಿ ಬಲು ಕಷ್ಟದ ಕೆಲಸ. ಆದರೆ ವಿಜಯ್ ಆಳವಾದ ಅಧ್ಯಯನದ ಮೂಲಕವೇ ಅದನ್ನು ಸಾಧ್ಯವಾಗಿಸಿಕೊಂಡಿದ್ದಾರೆ. ಮೂಲತಃ ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿರೋ ಗೋಲ್ಡನ್ ಸ್ಟಾರ್ ಗಣೇಶ್ ತೆರೆಯ ಮೇಲೆಯೂ ಪ್ರತೀ ಮನಸುಗಳಲ್ಲಿಯೂ ಕನ್ನಡತನದ ಕಿಚ್ಚು ಹಚ್ಚುವಂಥಾ ಪಾತ್ರದ ಮೂಲಕ ಮಿನುಗಲು ರೆಡಿಯಾಗಿದ್ದಾರೆ.