– ರನ್ಯಾಗೆ ನಿರ್ದೇಶನ ನೀಡುತ್ತಿದ್ದದ್ದೇ ತರುಣ್!
ಬೆಂಗಳೂರು: ಚಿನ್ನದ ಕಳ್ಳ ಸಾಗಾಣೆ ಪ್ರಕರಣದಲ್ಲಿ (Gold Smuggling Case) ರನ್ಯಾ ರಾವ್ (Ranya Rao) ಜೊತೆಗೆ ಬಂಧನಕ್ಕೆ ಒಳಗಾಗಿರುವ ಮತ್ತೊಬ್ಬ ಆರೋಪಿ ತರುಣ್ ರಾಜ್‌ಗೆ ಕೂಡ ಸಿನಿಮಾ ನಂಟಿರುವುದು ಬೆಳಕಿಗೆ ಬಂದಿದೆ.
ರನ್ಯಾ ಆಪ್ತ ಸ್ನೇಹಿತನಾಗಿದ್ದ ತರುಣ್ ರಾಜ್ (Tarun Raj) ತೆಲುಗು ಸಿನಿಮಾದಲ್ಲಿ ಸಕ್ರಿಯನಾಗಿದ್ದ. ತೆಲುಗಿನ ಮೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟನಾಗಿ ತರುಣ್ ರಾಜ್ ಅಭಿನಯಿಸಿದ್ದಾನೆ.
ಸಿನಿಮಾ ನಟನೆಗೆಂದೇ ತರುಣ್ ಕೊಂಡೂರು ರಾಜ್ ಹೆಸರನ್ನು ವಿರಾಟ್ ಕೊಂಡೂರು ರಾಜ್ ಎಂದು ಬದಲಾಯಿಸಿಕೊಂಡಿದ್ದ. ಎಲ್ಲರ ಜೊತೆಗೂ ವಿರಾಟ್ ಎಂದೇ ಗುರುತಿಸಿಕೊಂಡಿದ್ದ.
ಪರಿಚಯಂ ಸಿನಿಮಾದಲ್ಲಿ ನಾಯಕನಟನಾಗಿ ಅಭಿನಯಿಸಿದ್ದ. 2018 ರಲ್ಲಿ ತೆರೆ ಕಂಡಿದ್ದ ತೆಲುಗಿನ ಪರಿಚಯಂ ಸಿನಿಮಾದ ನಾಯಕ ನಟನಾಗಿದ್ದ ತರುಣ್‌ಗೆ ಸಿನಿಮಾ ಮೂಲಕವೇ ರನ್ಯಾ ಜೊತೆ ಸ್ನೇಹ ಬೆಳೆಸಿದ್ದ ಮಾಹಿತಿ ಸಿಕ್ಕಿದೆ. ಬಳಿಕ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಸಿಂಡಿಕೇಟ್‌ನಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಡಿಆರ್‌ಐ ಕಸ್ಟಡಿಯಲ್ಲಿರುವ ತರುಣ್ ರಾಜ್ ತೀವ್ರ ವಿಚಾರಣೆ ಮುಂದುವರೆದಿದೆ.
ದುಬೈನಲ್ಲಿ ಚಿನ್ನ ಸಂಗ್ರಹಿಸುವ ಕುರಿತು ನಟಿ ರನ್ಯಾಗೆ ಸ್ನೇಹಿತ ಹಾಗೂ ಹೋಟೆಲ್ ಉದ್ಯಮಿ ಪುತ್ರ ತರುಣ್ ರಾಜ್ ಮಾಹಿತಿ ನೀಡುತ್ತಿದ್ದ ಎಂದು ಮೂಲಗಳು ಹೇಳಿವೆ. ದುಬೈನಲ್ಲಿ ಯಾರಿಂದ ಚಿನ್ನ ಪಡೆದು ಆನಂತರ ಹೇಗೆ ಬೆಂಗಳೂರಿಗೆ ಸಾಗಿಸಬೇಕು ಎಂಬ ನೀಲನಕ್ಷೆಯನ್ನು ರನ್ಯಾಗೆ ತರುಣ್ ರವಾನಿಸುತ್ತಿದ್ದ. ಇದನ್ನೂ ಓದಿ: ಡೆಲ್ಲಿ ಅಂಗಳ ತಲುಪಿದ ನಟಿ ರನ್ಯಾ ರಾವ್ ಕೇಸ್: ಇಬ್ಬರು ಸಚಿವರು ಸೇಫ್
ದುಬೈ ಪಯಣದಲ್ಲಿ ಗೆಳತಿ ಜತೆ ನಿರಂತರವಾಗಿ ಆತ ಸಂಪರ್ಕದಲ್ಲಿದ್ದು ಸೂಚನೆ ಕೊಡುತ್ತಿದ್ದ. ತನ್ನ ಗೆಳೆಯನ ಸೂಚನೆ ಅನುಸಾರ ರನ್ಯಾ ನಡೆದುಕೊಳ್ಳುತ್ತಿದ್ದಳು ಎಂಬ ವಿಚಾರ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ.
ವಿದೇಶದಿಂದ ಚಿನ್ನ ಸಾಗಿಸುವ ಜಾಲ ಕೊರಿಯರ್ ಆಗಿ ರನ್ಯಾಳನ್ನು ಬಳಕೆ ಮಾಡಿರುವ ಸಾಧ್ಯತೆ ಇದೆ. ಈ ಚಿನ್ನ ಅಕ್ರಮ ಸಾಗಾಣ ಪ್ರಕರಣದಲ್ಲಿ ಹಲವರು ದೊಡ್ಡ ದೊಡ್ಡವರು ಭಾಗಿಯಾಗಿರುವ ವಿಚಾರ ಬಳಕಿಗೆ ಬರುತ್ತಿದ್ದಂತೆ ತನಿಖೆಗೆ ಈಗ ಜಾರಿ ನಿರ್ದೇಶನಾಲಯ ಎಂಟ್ರಿಕೊಟ್ಟಿದೆ.