ಬೆಂಗಳೂರು: ನನ್ನ ಕಪಾಳಕ್ಕೆ ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು 10-15 ಬಾರಿ ಹೊಡೆದು ತಪ್ಪನ್ನು ಒಪ್ಪಿಕೊಳ್ಳುವಂತೆ ಬೆದರಿಕೆ ಹಾಕಿದ್ದರು ಎಂದು ರನ್ಯಾ ರಾವ್ (Ranya Rao) ಗಂಭೀರ ಆರೋಪ ಮಾಡಿದ್ದಾಳೆ.
ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ (Gold Smuggling Case) ಸದ್ಯ ನ್ಯಾಯಾಂಗ ಬಂಧನದಲ್ಲಿರುವ ರನ್ಯಾ ಪರಪ್ಪನ ಅಗ್ರಹಾರ (Parappana Agrahara) ಜೈಲು ಅಧೀಕ್ಷಕರ ಮೂಲಕ ಡಿಆರ್‌ಐ ಎಡಿಜಿಗೆ ಪತ್ರ ಬರೆದಿದ್ದಾಳೆ.
ತನ್ನನ್ನು ತಾನು ಅಮಾಯಕಿ ಎಂದು ಬಿಂಬಿಸಿಕೊಂಡಿರುವ ರನ್ಯಾ ಯಾರನ್ನೋ ರಕ್ಷಿಸಲು ನನ್ನನ್ನು ಹರಕೆಯ ಕುರಿ ಮಾಡಲಾಗ್ತಿದೆ ಎಂದ ಆರೋಪಿಸಿದ್ದಾಳೆ. ಇದನ್ನೂ ಓದಿ: Gold Smuggling Case| ಪ್ರಭಾವಿ ನಾಯಕನ ಜರ್ಮನಿ ಟೂರ್ ಬಗ್ಗೆ ಅನುಮಾನ
ಪತ್ರದಲ್ಲಿ ಏನಿದೆ?
ಈ ಪ್ರಕರಣದ ಬಗ್ಗೆ ವಿವರಿಸಲು ನನಗೆ ಅವಕಾಶ ನೀಡಲಿಲ್ಲ. ವಿಮಾನದಲ್ಲೇ ಬಲವಂತವಾಗಿ ನನ್ನನ್ನು ಬಂಧಿಸಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಸಲಾಗಿದೆ. 10-15ಬಾರಿ ಮುಖಕ್ಕೆ ಹೊಡೆದಿರುವುದು ಸ್ಪಷ್ಟವಾಗಿ ಕಾಣುತ್ತದೆ. ದಾಖಲೆ ಮೇಲೆ ಸಹಿ ಮಾಡಲು ನಿರಾಕರಿಸಿದ್ದಕ್ಕಾಗಿ ಹಲ್ಲೆ ಮಾಡಿದ್ದಾರೆ.
ಈ ಪ್ರಕರಣದಲ್ಲಿ ನಾನು ಯಾವುದೇ ರೀತಿ ಭಾಗಿಯಾಗಿಲ್ಲ. 50-60 ಪುಟ ಟೈಪ್ ಮಾಡಿದ್ದ ಪೇಪರ್‌ಗೆ ಸಹಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ ಸುಮಾರು 40 ಖಾಲಿ ಪೇಪರ್ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ.
ಮಾರ್ಚ್ 3ರ ಸಂಜೆ 6:45 ಕ್ಕೆ ವಶಕ್ಕೆ ಪಡೆದು ಮಾರ್ಚ್ 4ರ ರಾತ್ರಿ 7:30ಕ್ಕೆ ಜಡ್ಜ್ ಮುಂದೆ ಹಾಜರು ಪಡಿಸಿದ್ದಾರೆ, ಅಲ್ಲಿಯವರೆಗೂ ಮಲಗಲು ಸಹ ಅವಕಾಶ ನೀಡಲಿಲ್ಲ. ನನ್ನ ತಂದೆ ಮತ್ತು ಕುಟುಂಬದವರ ಹೆಸರನ್ನು ಈ ಪ್ರಕರಣದಲ್ಲಿ ತರುವುದಾಗಿ ಹೆದರಿಸಿದ್ದಾರೆ. ಆದರೆ ಇದರಲ್ಲಿ ಅವರ ಪಾತ್ರವಿಲ್ಲ ನನ್ನ ಪಾತ್ರವೂ ಇಲ್ಲ. ಕೆಲವರನ್ನು ರಕ್ಷಿಸಲು ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ.
ಈ ಪ್ರಕರಣದಲ್ಲಿ ನಾನು ಅಮಾಯಕಳಾಗಿದ್ದು, ತಪ್ಪಾಗಿ ನನ್ನ ಮೇಲೆ ಅಪರಾದ ಹೊರಿಸಲಾಗಿದೆ. ಮಹಜರ್ ಮತ್ತು ಯಾವುದೇ ಸರ್ಚ್ ಮಾಡಿಲ್ಲ. ದೆಹಲಿಯಿಂದ ಬಂದ ಅಧಿಕಾರಿಗಳು ಕೆಲವು ಪ್ರಯಾಣಿಕರನ್ನು ರಕ್ಷಿಸಿ ನನ್ನನ್ನು ಸಿಲುಕಿಸಿದ್ದಾರೆ. ನನ್ನನ್ನು ಜಡ್ಜ್ ಮನೆಗೆ ಕರೆದೊಯ್ಯುವಾಗಲೂ ನನ್ನ ಮೇಲೆ ಹಲ್ಲೆ ಮಾಡಲಾಗಿದೆ.