ಬೆಂಗಳೂರು: ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದಿಂದ (DRI) ಬಂಧನಕ್ಕೆ ಒಳಗಾದ ನಟಿ ರನ್ಯಾ ರಾವ್ (Ranya Rao) ಜಾಮೀನು (Bail) ಅರ್ಜಿಯನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ರನ್ಯಾ ರಾವ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಳು. ನ್ಯಾ. ವಿಶ್ವನಾಥ್ ಸಿ. ಗೌಡರ್ ಅವರು ಅರ್ಜಿಯನ್ನು ವಿಚಾರಣೆ ನಡೆಸಿ ವಜಾಗೊಳಿಸಿದ್ದಾರೆ.
ಡಿಆರ್‌ಐ ಪರ ವಕೀಲರು ರನ್ಯಾಗೆ ಜಾಮೀನು ನೀಡಬಾರದು ಎಂದು ಪ್ರಬಲವಾಗಿ ವಾದ ಮಂಡಿಸಿದ್ದರು. ಈ ವಾದವನ್ನು ಕೋರ್ಟ್ ಪುರಸ್ಕರಿಸಿದೆ. ಇದನ್ನೂ ಓದಿ: ನಾನು ವಿಮಾನದಲ್ಲಿ ಚಿನ್ನ ತಂದೇ ಇಲ್ಲ, ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ: ರನ್ಯಾ ರಾವ್
ನಟಿ ರನ್ಯಾ ಪರ ಹಿರಿಯ ವಕೀಲ ಕಿರಣ್ ಜವಳಿ ವಾದ ಮಾಡಿದ್ದರು. ಡಿಆರ್‌ಐ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲನೆ ಮಾಡಿಲ್ಲ. ಹೆಣ್ಣು ಎಂದೂ ನೋಡದೇ ರಾತ್ರಿಯಿಡೀ ತನಿಖೆ ಮಾಡಿ ಮಾನಸಿವಾಗಿ ಹಿಂಸೆ ನೀಡುವ ಕೆಲಸವಾಗಿದೆ. ಅರೆಸ್ಟ್ ಮೇಮೊ ಕೂಡ ಕೊಟ್ಟಿಲ್ಲ. ಈ ಪ್ರಕರಣದಲ್ಲಿ ರನ್ಯಾ ಪಾತ್ರ ಇಲ್ಲ. ತನಿಖೆಗೆ ಸಹಕಾರ ನೀಡುತ್ತಿದ್ದು, ಜಾಮೀನು ನೀಡುವಂತೆ ಮನವಿ ಮಾಡಿಕೊಂಡಿದ್ದರು.
ಡಿಆರ್‌ಐ ಪರ ವಕೀಲ ಮಧುರಾವ್, ಪ್ರಾಥಮಿಕ ತನಿಖೆಯ ವೇಳೆ ಆರೋಪಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಮಾಡಿರುವುದು ಕಂಡುಬಂದಿದೆ. ಚಿನ್ನವನ್ನ ಕೂಡ ವಶಕ್ಕೆ ಪಡೆದುಕೊಂಡು ತನಿಖೆ ಮಾಡಲಾಗುತ್ತಿದೆ. ಮನೆ ಶೋಧ ಕಾರ್ಯದ ವೇಳೆ ಕೋಟಿ ಕೋಟಿ ಹಣ ಹಾಗೂ ಚಿನ್ನಭರಣಗಳು ಪತ್ತೆ ಆಗಿವೆ. ಒಂದು ದೊಡ್ಡ ಸಿಂಡಿಕೇಟ್ ಕೆಲಸ ಮಾಡುತ್ತಿರುವ ಬಗ್ಗೆ ತನಿಖೆಯ ವೇಳೆ ಮಾಹಿತಿ ಲಭ್ಯವಾಗಿದೆ. ಹವಾಲ ಹಣದಲ್ಲಿ ವ್ಯವಹಾರ ಆಗಿರುವ ಬಗ್ಗೆ ಅನುಮಾನಗಳು ಕೂಡ ಇವೆ. ಪೊಲೀಸ್ ಪ್ರೋಟೊಕಾಲ್ ದುರುಪಯೋಗ ಆಗಿದ್ದು, ಆ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಆರೋಪಿ ನಟಿ ರನ್ಯಾ ರಾವ್‌ಗೆ ಜಾಮೀನು ನೀಡಿದರೆ, ತನಿಖೆಗೆ ಹಿನ್ನಡೆ ಆಗುತ್ತದೆ ಎಂದು ವಾದಿಸಿದ್ದರು. ವಾದ-ಪ್ರತಿವಾದ ಅಲಿಸಿದ್ದ ನ್ಯಾಯಾದೀಶರು ಇಂದಿಗೆ ಆದೇಶ ಕಾಯ್ದಿರಿಸಿದ್ದರು.
ಮಾ.10 ರಂದು ಕೋರ್ಟ್ ರನ್ಯಾ ರಾವ್‌ಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟಿಸಿತ್ತು. ಹೀಗಾಗಿ ಮಾ.24 ರವರೆಗೆ ರನ್ಯಾ ರಾವ್ ಪರಪ್ಪನ ಅಗ್ರಹಾರದಲ್ಲೇ ಇರಲಿದ್ದಾಳೆ. ಮಾರ್ಚ್ 3 ರಂದು ರನ್ಯಾಳನ್ನು ವಶಕ್ಕೆ ಪಡೆದಿದ್ದ ಡಿಆರ್‌ಐ ಮಾರ್ಚ್ 4 ರಂದು ಬಂಧಿಸಿತ್ತು. ಇದನ್ನೂ ಓದಿ: ದುಬೈ ಟು ಬೆಂಗಳೂರು – ಆ 9 ಗಂಟೆಯಿಂದ ರನ್ಯಾ ರಾವ್ ಅರೆಸ್ಟ್!
ವಜಾಗೊಂಡಿದ್ದು ಯಾಕೆ?
ಈ ಪ್ರಕರಣದಲ್ಲಿ ಅಂತರರಾಷ್ಟ್ರೀಯ ಲಿಂಕ್‌ಗಳಿವೆ. ಒಂದು ವರ್ಷದ ಅವಧಿಯಲ್ಲಿ 27 ಬಾರಿ ವಿದೇಶಿ ಪ್ರಯಾಣ ಮಾಡಿದ್ದಾಳೆ. ಇದರಿಂದ ಅಂದಾಜು 38% ಕಸ್ಟಮ್ಸ್ ಸುಂಕ ವಂಚನೆ ಆಗಿರಬಹುದು. ಜೈಲಿನಿಂದ ಹೊರಬಂದಲ್ಲಿ ಸಾಕ್ಷಿ ನಾಶವಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟ ಕೋರ್ಟ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.