ಬೆಂಗಳೂರು: ರನ್ಯಾ ರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ (Gold Smuggling Case) ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ(DRI) ತನಿಖೆಯಲ್ಲಿ ಹೊಸ ಹೊಸ ವಿಚಾರಗಳು ಬಯಲಾಗುತ್ತಿದೆ. ವಿಚಾರಣೆ ವೇಳೆ ರನ್ಯಾ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಆದರೆ ಆಕೆಯ ಹೇಳಿಕೆಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಇದು ಹತ್ತಾರು ಅನುಮಾನಗಳಿಗೆ ಕಾರಣವಾಗ್ತಿದೆ.
ಇದೇ ವೇಳೆ, ರನ್ಯಾ ಪ್ರೋಟೋಕಾಲ್‌ಗೆ ಸಂಬಂಧಿಸಿ ಪ್ರೋಟೋಕಾಲ್ ಅಧಿಕಾರಿ ನೀಡಿದ್ದ ಹೇಳಿಕೆಯೂ ಬಯಲಾಗಿದೆ. ಶಿಷ್ಟಾಚಾರ ದುರ್ಬಳಕೆ ಪ್ರಕರಣ ರನ್ಯಾ ಮಲತಂದೆ ಬುಡಕ್ಕೆ ಬರುವಂತೆ ಕಾಣುತ್ತಿದೆ. ಹೀಗಾಗಿ ಐಪಿಎಸ್ ರಾಮಚಂದ್ರ ರಾವ್ ಅವರನ್ನು ಸುದೀರ್ಘ ಅವಧಿಗೆ ಕಡ್ಡಾಯ ರಜೆ ಮೇಲೆ ಕಳಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.
ಈ ಮಧ್ಯೆ ಶಿಷ್ಟಾಚಾರ ದುರ್ಬಳಕೆ ಆರೋಪ ಪ್ರಕರಣದಲ್ಲಿ ರಾಮಚಂದ್ರರಾವ್ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿರುವ ಎಸಿಎಸ್ ಗೌರವ್ ಗುಪ್ತಾಗೆ ನೆರವಾಗಲು ಸಿಐಡಿ ಡಿಐಜಿ ವಂಶಿಕೃಷ್ಣರನ್ನು ಸರ್ಕಾರ ನೇಮಕ ಮಾಡಿದೆ. ಇದನ್ನೂ ಓದಿ: ರನ್ಯಾಗೆ ಮಾತ್ರ ಸಿನಿಮಾ ನಂಟಿಲ್ಲ – ಆರೋಪಿ ತರುಣ್‌ಗೆ ಇದೆ ಟಾಲಿವುಡ್ ನಂಟು!
ರನ್ಯಾ ಹೇಳಿದ್ದೇನು?
ಮಾರ್ಚ್ 1ರಂದು ವಿದೇಶಿ ನಂಬರ್‌ನಿಂದ ನನಗೆ ಕರೆ ಬಂದಿತ್ತು. ಚಿನ್ನ ತಂದು ಡೆಲಿವರಿ ಮಾಡಬೇಕು ಎಂಬ ಸೂಚನೆ ಆ ಕರೆಯಲ್ಲಿ ಇತ್ತು. ನಂತರ ಟಿಕೆಟ್ ಬುಕ್ ಮಾಡಿಕೊಂಡು ಮಾರ್ಚ್ 2ರಂದು ದುಬೈಗೆ ಹೋದೆ.
ದುಬೈ ವಿಮಾನ ನಿಲ್ದಾಣದ ಟರ್ಮಿನಲ್ 3ರ ಗೇಟ್ ಎ ಬಳಿ ಬರಲು ಸೂಚನೆ ಸಿಕ್ಕಿತ್ತು. 6 ಅಡಿ ಎತ್ತರದ ವ್ಯಕ್ತಿಯೊಬ್ಬ ಬಂದು ಚಿನ್ನವಿದ್ದ ಎರಡು ಬಾಕ್ಸ್ ನೀಡಿದ. ಬಂಗಾರ ಬಚ್ಚಿಡಲು ವಿಮಾನ ನಿಲ್ದಾಣದಲ್ಲೇ ಬ್ಯಾಡೇಜ್ ಮತ್ತು ಕತ್ತರಿ ಖರೀದಿಸಿದೆ.
ವಾಶ್‌ರೂಂಗೆ ಹೋಗಿ ಮೈಗೆ ಚಿನ್ನದ ಗಟ್ಟಿಗಳನ್ನು ಅಂಟಿಸಿಕೊಂಡು ಬಂದೆ. ಹೇಗೆ ಕಳ್ಳಸಾಗಣೆ ಮಾಡಬೇಕು ಎಂಬುದನ್ನು ಯೂಟ್ಯೂಬ್ ನೋಡಿ ಕಲಿತೆ. ಹಿಂದೆಂದೂ ನಾನು ಚಿನ್ನ ಕಳ್ಳಸಾಗಣೆ ಮಾಡಿರಲಿಲ್ಲ. ಮೊದಲ ಬಾರಿಗೆ ಕಳ್ಳ ಸಾಗಾಣಿಕೆ ಮಾಡಿದ್ದೆ.
ಬೆಂಗಳೂರು ಏರ್‌ಪೋರ್ಟ್ ಟೋಲ್ ಬಳಿ ಬರಲು ನನಗೆ ಸೂಚನೆ ಸಿಕ್ಕಿತ್ತು. ಸರ್ವೀಸ್ ರೋಡ್‌ನಲ್ಲಿ ನಿಲ್ಲಿಸಿದ ಆಟೋದಲ್ಲಿ ಚಿನ್ನ ಇಟ್ಟು ಹೋಗಲು ತಿಳಿಸಿದ್ದರು. ನನ್ನ ಜೊತೆ ಮಾತಾಡಿದ್ದು ಯಾರೆಂದು ಗೊತ್ತಿಲ್ಲ. ಭಾಷೆ ನೋಡಿದರೆ ಆ ವ್ಯಕ್ತಿ ಆಫ್ರಿಕನ್ ಅಮೆರಿಕನ್ ಇರಬಹುದು.