ಚಿನ್ನ, ಬೆಳ್ಳಿ ಖರೀದಿಗೆ ಮುಗಿಬಿದ್ದ ಜನ – ದರ ಹೆಚ್ಚಿದ್ದರೂ ಖರೀದಿ ಜೋರು

Public TV
1 Min Read
Income Tax Raid on jewellery shops in Bengaluru Gold

ನವದೆಹಲಿ: ಆರ್‌ಬಿಐ (RBI) 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂದಕ್ಕೆ ಪಡೆಯುವ ಆದೇಶ ಪ್ರಕಟಿಸಿದ ಬೆನ್ನಲ್ಲೇ ಜನ ಚಿನ್ನ, ಬೆಳ್ಳಿ (Gold, Silver) ಖರೀದಿಸಲು ಮುಗಿಬಿದ್ದಿದ್ದಾರೆ.

ಹೌದು. ಶನಿವಾರ ದೇಶಾದ್ಯಂತ ಜುವೆಲ್ಲರಿ ಅಂಗಡಿಗಳಲ್ಲಿ (Jewellery Shop) ಭರ್ಜರಿ ವ್ಯಾಪಾರ ನಡೆದಿದೆ. ಜನರು ಚಿನ್ನವನ್ನು ದುಬಾರಿ ಬೆಲೆ ನೀಡಿ ಖರೀದಿಸುತ್ತಿರುವುದು ವಿಶೇಷ.

ಶನಿವಾರ ಜೈಪುರದಲ್ಲಿ 10 ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆ 63 ಸಾವಿ ರೂ. ಇದ್ದರೂ ಗ್ರಾಹಕರು 66 ಸಾವಿರ ರೂ. ನೀಡಿ ಖರೀದಿಸಿದ್ದಾರೆ. ದೇಶಾದ್ಯಂತ 10% ರಿಂದ 20% ರಷ್ಟು ಆಭರಣ ವ್ಯಾಪಾರ ಹೆಚ್ಚಾಗಿದೆ. ಸಾಧಾರಣವಾಗಿ ಅಕ್ಷಯ ತೃತೀಯಾ ಅಥವಾ ಹಬ್ಬದ ಸಮಯದಲ್ಲಿ ಹೆಚ್ಚಾಗಿ ಚಿನ್ನ ಖರೀದಿ ನಡೆಯುತ್ತಿರುತ್ತದೆ. ಆದರೆ ಈಗ ಯಾವುದೇ ಹಬ್ಬ ಇಲ್ಲದೇ ಇದ್ದರೂ ಆರ್‌ಬಿಐ ನಿರ್ಧಾರದಿಂದ ಆಭರಣ ಖರೀದಿ ಹೆಚ್ಚಾಗುತ್ತಿದೆ.  ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಐವರನ್ನು ರಕ್ಷಿಸಿದ ಪಬ್ಲಿಕ್ ಟಿವಿ ಚಾಲಕನಿಗೆ ಬಿಬಿಎಂಪಿ ಆಯುಕ್ತರಿಂದ ಸನ್ಮಾನ

rs 2000 note

ಪೆಟ್ರೋಲ್‌ ಪಂಪ್‌ನಲ್ಲಿ 2 ಸಾವಿರ ರೂ. ಚಲಾವಣೆ ಬಹಳ ವಿರಳ. ಆದರೆ ಈಗ ಹಲವು ಮಂದಿ 2000 ರೂ. ನೀಡಿ ಪೆಟ್ರೋಲ್‌ ಹಾಕಿಸುತ್ತಿದ್ದಾರೆ ಎಂದು ಕೋಲ್ಕತ್ತಾ ಮೂಲದ ಪೆಟ್ರೋಲ್‌ ಪಂಪ್‌ ಉದ್ಯೋಗಿ ತಿಳಿಸಿದ್ದಾರೆ.

2016ರ ನವೆಂಬರ್‌ 8 ರಂದು 500, 1000 ರೂ. ಮುಖಬೆಲೆಯ ನೋಟು ನಿಷೇಧ ನಿರ್ಧಾರ ಕೈಗೊಂಡ ಬೆನ್ನಲ್ಲೇ ಭಾರೀ ಸಂಖ್ಯೆಯ ಗ್ರಾಹಕರು ಚಿನ್ನವನ್ನು ಖರೀದಿ ಮಾಡಿದ್ದರು. ಈ ಕಾರಣಕ್ಕೆ ಆದಾಯ ತೆರಿಗೆ ಇಲಾಖೆ ಹಲವು ಜ್ಯುವೆಲ್ಲರಿ ಅಂಗಡಿಗಳಿಗೆ ನೋಟಿಸ್‌ ಜಾರಿ ಮಾಡಿ ಗ್ರಾಹಕರ ವಿವರ ಕೇಳಿತ್ತು. ಈ ಕಾರಣಕ್ಕೆ ಈ ಬಾರಿ ಜ್ಯುವೆಲ್ಲರಿಗಳು 2000 ರೂ. ಮುಖಬೆಲೆಯ ನೋಟುಗಳನ್ನು ನೀಡಿ ಆಭರಣ ಖರೀದಿಸುವ ಗ್ರಾಹಕರ ಎಲ್ಲಾ ವಿವರಗಳನ್ನು ಸಂಗ್ರಹಿಸುತ್ತಿದೆ.

 

2000 ರೂ. ನೋಟು ಬಳಕೆಗೆ ಆರ್‌ಬಿಐ ಸಂಪೂರ್ಣ ನಿಷೇಧ ಹೇರಿಲ್ಲ. ಈಗಲೂ ವ್ಯವಹಾರಗಳಿಗೆ ಬಳಸಬಹುದು. ಪಾವತಿ ಮಾಡಲು, ಹಣವನ್ನು ಸ್ವೀಕರಿಸಲು ಬಳಕೆ ಮಾಡಬಹುದು. ಸೆಪ್ಟೆಂಬರ್‌ 30ರವರೆಗೂ ಈ ನೋಟುಗಳು ಕಾನೂನು ಮಾನ್ಯತೆ ಹೊಂದಿರಲಿವೆ.

Share This Article