ನವದೆಹಲಿ: ಚಿನ್ನ ಖರೀದಿ ಮಾಡುವವರಿಗೆ ಸಿಹಿ ಸುದ್ದಿ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ (Gold Price) ಇಂದು (ನ.14) 680 ರೂ. ಇಳಿಕೆಯಾಗಿದ್ದರೆ 22 ಕ್ಯಾರೆಟ್ ಚಿನ್ನದ ಬೆಲೆ 624 ರೂ. ಇಳಿದಿದೆ.
ಬೆಲೆ ಇಳಿಕೆಯಿಂದ 10 ಗ್ರಾಂ 24 ಕ್ಯಾರೆಟ್ ಚಿನ್ನದ ದರ 73,940 ರೂ. ಇದ್ದರೆ 10 ಗ್ರಾಂ 22 ಕ್ಯಾರೆಟ್ ಚಿನ್ನ ದರ 67,778 ರೂ.ಗೆ ಇಳಿದಿದೆ. 1 ಕೆಜಿ ಬೆಳ್ಳಿ ದರ 1,067 ರೂ. ಇಳಿಕೆಯಾಗಿದ್ದು ಇಂದು 88,130 ರೂ. ನಲ್ಲಿ ವ್ಯವಹಾರ ನಡೆಸುತ್ತಿದೆ. ಇದನ್ನೂ ಓದಿ: ಅಮೆರಿಕದ ಗುಪ್ತಚರ ವಿಭಾಗಕ್ಕೆ ತುಳಸಿ ಬಾಸ್- ಭಾರತ ಸಂಬಂಧ ಇಲ್ಲದೇ ಇದ್ದರೂ ಹಿಂದೂ ಹೆಸರು ಬಂದಿದ್ದು ಹೇಗೆ?
ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶ (US Presidential Election Results) ಪ್ರಕಟಗೊಂಡ ದಿನವಾದ ನ.6 ರಂದು 10 ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 80,413 ರೂ. ದರ ಇತ್ತು. ಒಂದು ವಾರದಲ್ಲಿ ಚಿನ್ನದ ಬೆಲೆ ಸುಮಾರು 6 ಸಾವಿರ ರೂ. ಇಳಿಕೆಯಾಗಿದೆ.
ಯಾಕೆ ಇಳಿಕೆ?
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ (Donald Trump) ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಡಾಲರ್ (Dollar) ಮೌಲ್ಯ ಏರಿಕೆಯಾಗುತ್ತದೆ. ಅಮೆರಿಕದಲ್ಲಿ ಈಗ ಹಣದುಬ್ಬರ ಜಾಸ್ತಿಯಿದ್ದು ಬೆಲೆಗಳು ಏರಿಕೆಯಾಗಿದೆ. ಬೆಲೆ ಏರಿಕೆಯನ್ನು ನಿಯಂತ್ರಿಸಲು ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಮುಂದೆ ಬಡ್ಡಿದರವನ್ನ ಏರಿಸುವ ಸಾಧ್ಯತೆಯಿದೆ. ಬಡ್ಡಿದರ ಏರಿಕೆಯಾದರೆ ಡಾಲರ್ ಮೌಲ್ಯವೂ ಏರಿಕೆ ಆಗುತ್ತದೆ. ಡಾಲರ್ ಬಾಂಡ್‌ಗಳ ಮೌಲ್ಯ ಏರಿಕೆ ವಿಶ್ವದ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುತ್ತದೆ.
ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಭೀತಿಯಿಂದ ಹೂಡಿಕೆದಾರರು ಹಿಂದೆ ಸ್ಟಾಕ್ ಮಾರುಕಟ್ಟೆ ಮತ್ತು ಚಿನ್ನದ ಮೇಲೆ ಭಾರೀ ಹೂಡಿಕೆ ಮಾಡುತ್ತಿದ್ದರು. ಇದರಿಂದಾಗಿ ಚಿನ್ನದ ಬೆಲೆ ಏರಿಕೆಯಾಗಿತ್ತು. ಈಗ ಡಾಲರ್ ಬಲಗೊಳ್ಳುತ್ತಿದ್ದು ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆ ಕಡಿಮೆ ಮಾಡುತ್ತಿರುವುದರಿಂದ ಬೆಲೆಗಳು ಇಳಿಕೆಯಾಗುತ್ತಿದೆ.
ಅಕ್ಟೋಬರ್‌ನಲ್ಲಿ ಭಾರತ ಷೇರು ಮಾರುಕಟ್ಟೆಯಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) 1,14,445 ಕೋಟಿ ರೂ. ಹಣವನ್ನು ಹಿಂದಕ್ಕೆ ಪಡೆದರೆ ಈಗಾಲೇ ನವೆಂಬರ್‌ನಲ್ಲಿ 27,683 ಕೋಟಿ ರೂ. ಹಿಂದಕ್ಕೆ ಪಡೆದಿದ್ದಾರೆ. ಪರಿಣಾಮ ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗಿದೆ. ಕಳೆದ ಅಕ್ಟೋಬರ್‌ನಲ್ಲಿ 81,973 ಇದ್ದ ಸೆನೆಕ್ಸ್ ಈಗ ಸುಮಾರು 4 ಸಾವಿರ ಅಂಕ ಪತನಗೊಂಡು 77,500 ಅಂಕಕ್ಕೆ ಕುಸಿದಿದೆ.