ಬೆಂಗಳೂರು: ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್‌ನಲ್ಲಿ 14 ಕೆಜಿ 600 ಗ್ರಾಂನಷ್ಟು ಚಿನ್ನಾಭರಣ ಖರೀದಿಸಿ ವಂಚಿಸಿ ಅರೆಸ್ಟ್ ಆಗಿದ್ದ ಐಶ್ವರ್ಯಗೌಡ ಹಾಗೂ ಆಕೆಯ ಪತಿ ಹರೀಶ್ ಗೌಡಗೆ ಹೈಕೋರ್ಟ್ ಜಾಮೀನು ನೀಡಿದೆ.
ವಂಚನೆ ಕೇಸ್‌ನಲ್ಲಿ ಚಂದ್ರಾ ಲೇಔಟ್ ಪೊಲೀಸರು ಆರೋಪಿಗಳನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದರು. ಹೈಕೋರ್ಟ್ ಜಾಮೀನು ನೀಡಿದ ಹಿನ್ನೆಲೆ ಆರೋಪಿಗಳನ್ನು ಮಂಗಳವಾರ ರಾತ್ರಿಯೇ ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡಲಾಗಿದೆ.
ಆರೋಪಿ ಐಶ್ವರ್ಯ ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ ಸುರೇಶ್ (D.K Suresh) ಸಹೋದರಿ ಅಂತ ಹೇಳಿಕೊಂಡು 14.600 ಕೆಜಿಯಷ್ಟು ಚಿನ್ನಾಭರಣ ಖರೀದಿಸಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ 9ನೇ ಎಸಿಎಂಎಂ ಕೋರ್ಟ್ ಆದೇಶಿಸಿತ್ತು. ಅಲ್ಲಿಂದ ಪೊಲೀಸರು ಇಬ್ಬರು ಆರೋಪಿಗಳನ್ನು ಕಸ್ಟಡಿಗೆ ಪಡೆದಿದ್ದರು.
ಏನಿದು ಪ್ರಕರಣ?
ಐಶ್ವರ್ಯ ಗೌಡ ಕಳೆದ ಜನವರಿಯಿಂದ ಇಲ್ಲಿಯವರೆಗೂ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್‌ನಲ್ಲಿ 14 ಕೆಜಿ 600 ಗ್ರಾಂನಷ್ಟು ಚಿನ್ನಾಭರಣ ಖರೀದಿಸಿದ್ದಳು. ಹಣ ಕೊಡದೇ ಇದ್ದಾಗ, ಡಿಕೆ ಸುರೇಶ್ ಕಡೆಯಿಂದ ಮಾಲೀಕರಿಗೆ ಕರೆ ಮಾಡಿಸೋದಾಗಿ ಬೆದರಿಕೆ ಹಾಕಿದ್ದರು. ಈ ವೇಳೆ ಸಿನಿಮಾ ನಟ ಧರ್ಮೇಂದ್ರ ಎಂಬುವವರಿಂದ ಐಶ್ವರ್ಯಗೌಡ ಕರೆ ಮಾಡಿಸಿ, ಬೆದರಿಕೆ ಹಾಕಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ.
ಧಮೇಂದ್ರ ಡಿ.ಕೆ ಸುರೇಶ್ ವಾಯ್ಸ್‌ನಲ್ಲಿ ಕರೆ ಮಾಡಿದ್ದ ಧರ್ಮೇಂದ್ರ ಮಾಲೀಕರಾದ ವನಿತಾ ಐತಾಳ್‌ಗೆ ಕರೆ ಮಾಡಿ ಸಮಯ ಕೇಳಿದ್ದರು. ಕೊನೆಗೆ ತಾನೇ ಧರ್ಮೇಂದ್ರನನ್ನ ಕಳುಹಿಸಿ ಕೊಲೆ ಮಾಡಿಸುವುದಾಗಿಯೂ ಬೆದರಿಕೆ ಹಾಕಿದ್ದರು. ಅವಾಚ್ಯ ಶಬ್ಧಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ಜ್ಯುವೆಲರಿ ಮಾಲೀಕಾರದ ವನಿತಾ ಆರ್.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.