ಮುಂಬೈ: 8 ವರ್ಷದಲ್ಲೇ ಭಾರತದಲ್ಲಿ ಚಿನ್ನದ ಬಳಕೆ ಭಾರೀ ಇಳಿಕೆಯಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ (ಡಬ್ಲ್ಯೂಜಿಸಿ)ಹೇಳಿದೆ.
ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಸರಾಸರಿ ಪ್ರತಿ ವರ್ಷ 845 ಟನ್ ಚಿನ್ನ ಬಳಕೆಯಾಗುತಿತ್ತು. ಆದರೆ 2017ರಲ್ಲಿ ಅಂದಾಜು 650 ಟನ್ ಬಳಕೆಯಾಗುವ ಸಾಧ್ಯತೆಯಿದೆ ಎಂದು ಭಾರತದ ಡಬ್ಲ್ಯೂಜಿಸಿ ಆಡಳಿತ ನಿರ್ದೇಶಕರಾದ ಸೋಮಸುಂದರಂ ಪಿಆರ್ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
Advertisement
2016ರಲ್ಲಿ 666.1 ಟನ್ ಚಿನ್ನ ಬಳಕೆಯಾಗಿತ್ತು, ಜಿಎಸ್‍ಟಿ ಜಾರಿ ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಜಾರಿ ಮಾಡಿ ಆಭರಣ ಖರೀದಿ ಮೇಲೆ ಕಠಿಣ ಕ್ರಮವನ್ನು ಕೇಂದ್ರ ಸರ್ಕಾರ ವಿಧಿಸಿದ ಬಳಿಕ ಚಿನ್ನದ ಬಳಕೆ ಭಾರೀ ಇಳಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Advertisement
ಜುಲೈ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ದೇಶದ ಚಿನ್ನ ಬೇಡಿಕೆ ಶೇ.24ರಷ್ಟು ಇಳಿಕೆಯಾಗಿದೆ. ಭಾರತದಲ್ಲಿ ಮೂರನೇ ಎರಡರಷ್ಟು ಚಿನ್ನದ ಬೇಡಿಕೆ ಗ್ರಾಮೀಣ ಭಾಗದಿಂದ ಬರುತ್ತದೆ. ಆದರೆ ಈ ಬಾರಿ ಮುಂಗಾರು ಮಳೆ ಕೆಲವೆಡೆ ಬಾರದೇ ಇದ್ದ ಕಾರಣ ಚಿನ್ನದ ಬೇಡಿಕೆ ಕುಸಿದಿದೆ ಎಂದು ಡಬ್ಲ್ಯೂಜಿಸಿ ತನ್ನ ವರದಿಯಲ್ಲಿ ತಿಳಿಸಿದೆ.
Advertisement
Advertisement
ಅಕ್ಟೋಬರ್ – ಡಿಸೆಂಬರ್ ವೇಳೆ ಹಬ್ಬಗಳು ಮತ್ತು ಮದುವೆಗಳು ಹೆಚ್ಚಾಗಿ ನಡೆಯುವ ಕಾರಣ ಈ ಅವಧಿಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ಡಬ್ಲ್ಯೂಜಿಸಿ ಹೇಳಿದೆ.
ಜಿಎಸ್‍ಟಿಗೂ ಮೊದಲು ಚಿನ್ನದ ಮೇಲೆ ಸೇವಾ ತೆರಿಗೆ 1.2% ಇತ್ತು. ಜಿಎಸ್‍ಟಿಯಲ್ಲಿ ಚಿನ್ನದ ಮೇಲೆ 3% ತೆರಿಗೆ ವಿಧಿಸಲಾಗಿದೆ.
ಇದೇ ಅಕ್ಟೋಬರ್ ನಲ್ಲಿ 50 ಸಾವಿರ ರೂ. ಮೇಲ್ಪಟ್ಟ ಚಿನ್ನಾಭರಣಗಳ ಖರೀದಿಗೆ ಪಾನ್‍ಕಾರ್ಡ್ ಕಡ್ಡಾಯಗೊಳಿಸಿದ್ದ ಕಾನೂನನ್ನು ಕೇಂದ್ರ ಸರ್ಕಾರ ಹಿಂಪಡೆದಿತ್ತು. ಇನ್ನು ಮುಂದೆ 2 ಲಕ್ಷ ರು. ವರೆಗಿನ ಚಿನ್ನಾಭರಣ ಖರೀದಿಗೆ ಪಾನ್‍ಕಾರ್ಡ್ ಕಡ್ಡಾಯ ಇರುವುದಿಲ್ಲ. ಅದಕ್ಕೆ ಮೇಲ್ಪಟ್ಟ ಮೊತ್ತದ ಖರೀದಿಗೆ ಮಾತ್ರವೇ ಪಾನ್ ಕಡ್ಡಾಯ ಎಂದು ಸರ್ಕಾರ ತಿಳಿಸಿತ್ತು.
ನೋಟ್ ಬ್ಯಾನ್ ಬಳಿಕ ಆಭರಣ ಉದ್ಯಮಿಗಳು, ಅಕ್ರಮ ಹಣ ಸಕ್ರಮ ಮಾಡುವ ದಂಧೆಯಲ್ಲಿ ಭಾಗಿಯಾಗಿದ್ದಾರೆಂಬ ಸಂಶಯದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ- 2002 ಅನ್ನು ಆಭರಣ ಖರೀದಿ ವ್ಯವಹಾರಗಳಿಗೆ ವಿಸ್ತರಿಸಿತ್ತು. ವಿಸ್ತರಿಸಿದ ಪರಿಣಾಮ 50 ಸಾವಿರ ರೂ. ಮೇಲ್ಪಟ್ಟ ಚಿನ್ನಖರೀದಿ ವೇಳೆ ಗ್ರಾಹಕರು ಪಾನ್‍ಕಾರ್ಡ್ ವಿವರ ನೀಡಬೇಕಿತ್ತು. ಜೊತೆಗೆ ವ್ಯಾಪಾರಿಗಳು ಭಾರೀ ಮೌಲ್ಯದ ಖರೀದಿ ಬಗ್ಗೆ ದಾಖಲೆ ಇಟ್ಟುಕೊಳ್ಳುವುದರ ಜತೆಗೆ ಅದನ್ನು ಹಣಕಾಸು ಗುಪ್ತ ಚರ ಇಲಾಖೆಗೆ ಸಲ್ಲಿಸಬೇಕಿತ್ತು.
ಪ್ರಸ್ತುತ ಈಗ 2 ಲಕ್ಷ ರೂ. ಮೇಲ್ಪಟ್ಟ ಚಿನ್ನಾಭರಣ ಖರೀದಿಗೆ ಪಾನ್, ಆಧಾರ್ ನಂಬರ್, ಡಿಎಲ್ ಅಥವಾ ಪಾಸ್‍ಪೋರ್ಟ್ ಪ್ರತಿ ನೀಡುವುದು ಕಡ್ಡಾಯವಾಗಿದೆ.