ಬೆಳಗಾವಿ: ಜಗತ್ ಪ್ರಸಿದ್ಧ ನಯಾಗರ ಫಾಲ್ಸ್ ನೀವು ನೋಡಿರಬಹುದು. ಅದೇ ನಮ್ಮ ರಾಜ್ಯದಲ್ಲಿಯೇ ಒಂದು ಮಿನಿ ನಯಾಗರ ಫಾಲ್ಸ್ ಇದ್ದು, ರಾಜ್ಯದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಎಲ್ಲಿ ನೋಡಿದ್ರೂ ನೀರು ಕಲ್ಲು ಬಂಡೆಗಳಿಂದ ಹರಿದು ಬರುತ್ತಿರುವ ಜಲಸಾಗರ ಮುಂದೆ ಬಂದು ಎತ್ತರದ ಪ್ರದೇಶದಿಂದ ಕೆಳಕ್ಕೆ ಧುಮ್ಮುಕುವ ದೃಶ್ಯವನ್ನು ನೋಡಲು ಕಣ್ಣಿಗೆ ಹಬ್ಬ.
ಸಕ್ಕರೆ ಬೀಡು ರಾಜ್ಯದ ಹೆಬ್ಬಾಗಿಲು ಬೆಳಗಾವಿ ಅಂದಾಕ್ಷಣ ಜನರಿಗೆ ಗಡಿ ಗಲಾಟೆ ಭಾಷಾ ವೈಷಮ್ಯ ನೆನಪಾಗುವುದು ಸಹಜ. ಆದರೆ ಇಲ್ಲಿಯ ಹಲವಾರು ಪ್ರೇಕ್ಷಣಿಯ ಸ್ಥಳಗಳ ಬಗ್ಗೆ ಇನ್ನು ಕೆಲವರಿಗೆ ಮಾಹಿತಿಯೇ ಇಲ್ಲ. ಬೆಳಗಾವಿ ಜಿಲ್ಲೆ ಭೌಗೊಳಿಕವಾಗಿ ಎತ್ತರದ ಸ್ಥಾನದಲ್ಲಿದೆ. ಮಹದಾಯಿ ಮಲಪ್ರಭಾ ಮಾರ್ಕಂಡೆಯ, ಘಟಪ್ರಭಾ ಹಿರಣ್ಯ ಕೇಶಿ, ಕೃಷ್ಣಾ ವೇದಗಂಗಾ, ದೂಧಗಂಗಾ ನದಿಗಳು ಇಲ್ಲಿ ಹರಿಯುತ್ತವೆ. ಅತಿ ಹೆಚ್ಚು ನದಿಗಳು ಹರಿಯುವ ಜಿಲ್ಲೆ ಬೆಳಗಾವಿ ಎಂದರೆ ತಪ್ಪಾಗಲಾರದು.
Advertisement
Advertisement
ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿಗಳ ಸಂಗಮದಿಂದ ಸ್ವಲ್ಪ ದೂರ ಕ್ರಮಿಸಿದರೆ ಅಲ್ಲಿ ಮಿನಿ ನಯಾಗರ ಫಾಲ್ಸ್ ಸಿಗುತ್ತದೆ. ಜಗಪ್ರಸಿದ್ಧ ನಯಾಗರ ಫಾಲ್ಸ್‍ನ್ನು ಹೋಲುವ ಈ ಫಾಲ್ಸ್ ಗೆ ಗೋಕಾಕ್ ಫಾಲ್ಸ್ ಎನ್ನುತ್ತಾರೆ. ಬೆಳಗಾವಿ ಜಿಲ್ಲೆ ಗೊಕಾಕ್ ತಾಲೂಕಿನ ಗೊಕಾಕ್ ಫಾಲ್ಸ್ನಲ್ಲಿ ಬ್ರಿಟಿಷರು ಸ್ಥಾಪಿಸಿದ ಹತ್ತಿಯ ಗಿರಣಿಯೂ ಇದೆ. ಮಳೆಗಾಲ ಬಂತೆಂದರೆ ಈ ಮಿನಿ ನಯಾಗಾರ ಫಾಲ್ಸ್ ನೋಡಲು ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಗೋವಾ ರಾಜ್ಯದಿಂದ ಜನ ಸಾಗರ ಹರಿದು ಬರುತ್ತಿದೆ. ದಿನವೊಂದಕ್ಕೆ 10 ಸಾವಿರ ಜನ ಇಲ್ಲಿ ಭೇಟಿ ನೀಡುತ್ತಿದ್ದಾರೆ. ಬೆಳಗಾವಿಯಿಂದ 60 ಕಿ.ಮೀ ದೂರದಲ್ಲಿರುವ ಈ ಗೋಕಾಕ್ ಫಾಲ್ಸ್ ಇದೆ.
Advertisement
Advertisement
ಇಲ್ಲಿ ಅತಿ ಹಳೆಯದಾದ ತೂಗು ಸೇತುವೆಯಿದೆ. ಬ್ರಿಟಿಷರು ನಿರ್ಮಿಸಿದ ಈ ಸೇತುವೆಯಲ್ಲಿ ದಾಟುವುದೆಂದರೆ ಭಾರೀ ರೋಮಾಂಚನವಾಗುತ್ತದೆ. ಕಾಟನ್ ಮಿಲ್ ಕಾರ್ಮಿಕರಿಗಾಗಿ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಈ ಸೇತುವೆ ಮೇಲೆ ಪ್ರವಾಸಿಗರು ಹೋಗುವುದನ್ನು ನಿಷೇಧಿಸಲಾಗಿದೆ. ಶಿವಲಿಂಗೇಶ್ವರ ದೇವಸ್ಥಾನ ಹಾಗೂ ಹಳೆಯ ಕಾಟನ್ ಮಿಲ್ ಅಲ್ಲಿಯೇ ಸಿದ್ಧಪಡಿಸಿದ ವಸ್ತ್ರ ಉಡುಪುಗಳ ಮಳಿಗೆ ಹೀಗೆ ಒಂದು ದಿನದ ಪ್ರವಾಸಕ್ಕೆ ಈ ಫಾಲ್ಸ್ ಹೇಳಿ ಮಾಡಿಸಿದ ತಾಣವಾಗಿದೆ.
ಭೋರ್ಗರೆಯುವ ನೀರು ವಿಶಾಲವಾಗಿ ಹರಿದು ಬರುವ ಜಲಸಾಗರವನ್ನು ನೋಡುತ್ತ ಜನ ಮೈ ಮರೆಯುತ್ತಾರೆ. ಟರ್ಬೈನ್ ನಿಂದ ವಿದ್ಯುತ್ ಉತ್ಪಾದನೆ ಮಾಡಿ ಇಲ್ಲಿಯ ಕಾಟನ್ ಮಿಲ್‍ಗೆ ಬಳಸಲಾಗುತ್ತದೆ. ಮಳೆಗಾಲದಲ್ಲಿ ಸರಿ ಸುಮಾರು ಲಕ್ಷಾಂತರ ಜನ ಇಲ್ಲಿಗೆ ಬರುವುದರಿಂದ ಕಡಲೆಕಾಯಿ, ಗೋವಿನ ಜೋಳ ಹೊಟೇಲ್ ಉದ್ಯಮದವರಿಗೆ ಉತ್ತಮ ಲಾಭ ದೊರೆಯುತ್ತದೆ.
ಈ ಫಾಲ್ಸ್ ನಿಂದ ಸ್ವಲ್ಪ ದೂರ ಕ್ರಮಿಸಿದರೆ ಸ್ಟೆಪ್ ಫಾಲ್ಸ್ ಅಂದರೆ ಗೊಡಚಿನಮಲ್ಕಿ ಫಾಲ್ಸ್, ಘಟಪ್ರಭಾ ಪಕ್ಷಿಧಾಮಗಳು ಪ್ರೇಕ್ಷಣಿಯ ಸ್ಥಳಗಳನ್ನು ನೋಡಬಹುದು. ಒಟ್ಟಾರೆ ಮಿನಿ ನಯಾಗರ ಫಾಲ್ಸ್ ಎಂದೇ ಖ್ಯಾತಿ ಪಡೆದಿರುವ ಗೋಕಾಕ್ ಫಾಲ್ಸ್ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv