ತುಮಕೂರು: ನಾಥೂರಾಮ್ ಗೋಡ್ಸೆ ಅಪ್ಪಟ ದೇಶಭಕ್ತ ಎಂದು ಪೋಸ್ಟ್ ಹಾಕಿದ್ದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರನ್ನು ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದಿಂದ ವಜಾಗೊಳಿಸಿದ್ದಾರೆ.
ತುಮಕೂರು ಜಿಲ್ಲೆಯ ಹನುಮಂತರಾಜು ತಮ್ಮ ಫೇಸ್‍ಬುಕ್‍ನಲ್ಲಿ ನಾಥೂರಾಮ್ ಗೋಡ್ಸೆ ಅಪ್ರತಿಮ ದೇಶಭಕ್ತ ಎಂದು ಶುಕ್ರವಾರ ಪೋಸ್ಟ್ ಹಾಕಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಅಸ್ಥಿಯನ್ನು ಸಿಂಧೂ ನದಿಯಲ್ಲಿ ವಿಸರ್ಜನೆ ಮಾಡಬೇಕು ಎಂದು ಮಹಾನ್ ರಾಷ್ಟ್ರಭಕ್ತ ನಾಥೂರಾಮ್ ಗೋಡ್ಸೆ ನೇಣಿನ ಕುಣಿಕೆಗೆ ತಲೆ ಕೊಟ್ಟ ಅಂತ ಮತ್ತೊಂದು ಪೋಸ್ಟ್ ಮಾಡಿದ್ದಾರೆ.
Advertisement
Advertisement
ಈ ಸಂಬಂಧ ಜಿಲ್ಲಾ ಬಿಜೆಪಿ ಘಟಕದಿಂದ ನೋಟಿಸ್ ಬೆಳಗ್ಗೆ ನೀಡಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಹನುಮಂತರಾಜು ಅವರನ್ನು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸ್ಥಾನದಿಂದ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆಗೊಳಿಸಿ, ಆದೇಶ ಹೊರಡಿಸಿದ್ದಾರೆ.
Advertisement
ಭೋಪಾಲ್‍ನಲ್ಲಿ ಗುರುವಾರ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಸಾಧ್ವಿ ಪ್ರಜ್ಞಾಸಿಂಗ್ ಅವರು, ನಾಥೂರಾಮ್ ಗೋಡ್ಸೆ ದೇಶಭಕ್ತರು. ಅವರು ದೇಶಭಕ್ತರಾಗಿಯೇ ಜನರ ಮನದಲ್ಲಿ ಇರುತ್ತಾರೆ. ಗೋಡ್ಸೆ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಿದ್ದಾರೆ. ಅವರನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ. ಅಂತವರಿಗೆ ಈ ಚುನಾವಣೆ ಮೂಲಕ ಉತ್ತರ ನೀಡಲಾಗುತ್ತದೆ ಎಂದು ನಟ ಕಮಲ್ ಹಾಸನ್ ವಿರುದ್ಧ ಕಿಡಿಕಾರಿದ್ದರು.
Advertisement
ಸಾಧ್ವಿ ಪ್ರಜ್ಞಾಸಿಂಗ್ ಅವರ ಬೆನ್ನಲ್ಲೇ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಹಾಗೂ ನಳಿನ್ ಕುಮಾರ್ ಕಟೀಲ್ ಗೋಡ್ಸೆ ದೇಶಭಕ್ತಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿ, ಡಿಲೀಟ್ ಮಾಡಿದ್ದರು.
ಮಹಾತ್ಮ ಗಾಂಧಿ ಪಾಕಿಸ್ತಾನದ ಪಿತಾಮಹ ಎಂದು ಮಧ್ಯಪ್ರದೇಶದ ಬಿಜೆಪಿ ಮುಖಂಡ ಅನಿಲ್ ಸೌಮಿತ್ರ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದಾಗಿ ಬಿಜೆಪಿ ಹೈಕಮಾಂಡ್ ಅನಿಲ್ ಸೌಮಿತ್ರ ಅವರನ್ನು ಪಕ್ಷದಿಂದ ವಜಾಗೊಳಿಸಿದೆ. ಇತ್ತ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಗುರುವಾರದಿಂದ 10 ದಿನಗಳ ಒಳಗೆ ಗೋಡ್ಸೆ ಪರವಾಗಿ ಮಾತನಾಡಿದ ನಾಯಕರು ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಬೇಕು. ಪಕ್ಷದ ಅಂತರಿಕವಾಗಿ ಶಿಸ್ತು ಸಮಿತಿ ಎದುರಿಸಬೇಕಾಗುತ್ತದೆ ಎಂದು ಅಮಿತ್ ಶಾ ಸೂಚಿಸಿದ್ದಾರೆ.