ಸಿನಿಮಾ ಆಯ್ಕೆ ಮಾಡಿಕೊಳ್ಳುವುದರಲ್ಲಿ ಚತುರನಾಗಿರೋ ನಟ ನೀನಾಸಂ ಸತೀಶ್ ಸದ್ಯದಲ್ಲೇ ‘ಗೋಧ್ರಾ’ ಚಿತ್ರದ ಮೂಲಕ ರಂಜಿಸಲು ಬರ್ತಿದ್ದಾರೆ. ಚಂಬಲ್ ಚಿತ್ರದಲ್ಲಿ ಪವರ್ ಫುಲ್ ಅಧಿಕಾರಿ ಪಾತ್ರ ನಿರ್ವಹಿಸಿದ್ದ ಸತೀಶ್ ‘ಗೋಧ್ರಾ’ ಚಿತ್ರದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಬಣ್ಣ ಹಚ್ಚಿ ಗಮನ ಸೆಳೆಯಲು ಸಿದ್ಧರಾಗಿದ್ದಾರೆ. ಚಿತ್ರೀಕರಣ ಮುಗಿಸಿ ಚಿತ್ರದ ಡಬ್ಬಿಂಗ್ ಕೂಡ ಕಂಪ್ಲೀಟ್ ಮಾಡಿರುವ ಚಿತ್ರತಂಡ ಚಿತ್ರದ ಹೈಬಜೆಟ್ ಹಾಡಿನ ಚಿತ್ರೀಕರಣಕ್ಕೆ ಸಿದ್ಧವಾಗಿದೆ.
ನಾಯಕನ ಎಂಟ್ರಿ ಸಾಂಗ್ ಇದಾಗಿದ್ದು, ಒಂದು ಹಾಡಿಗಾಗಿ ನಲವತ್ತು ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ ಚಿತ್ರತಂಡ. ಸತೀಶ್ ನೀನಾಸಂ ಕೆರಿಯರ್ ನಲ್ಲೇ ಇದು ಬಿಗ್ ಬಜೆಟ್ ಪ್ರಾಜೆಕ್ಟ್ ಆಗಿರೋದ್ರ ಜೊತೆಗೆ ಹಾಡಿಗಾಗಿ ಇಷ್ಟು ವೆಚ್ಚ ಮಾಡುತ್ತಿರೋದು ಇದೇ ಮೊದಲ ಸಿನಿಮಾ ಅಂತಾರೆ ಅಭಿನಯ ಚತುರ ಸತೀಶ್. ಚೇತನ್ ಕುಮಾರ್ ಸಾಹಿತ್ಯದಲ್ಲಿ ಮೂಡಿ ಬರ್ತಿರೋ ಈ ಹಾಡಿನ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಅದ್ಧೂರಿ ಸೆಟ್‍ನಲ್ಲಿ ಹಾಡನ್ನು ಸೆರೆಹಿಡಿಯಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇಲ್ಲಿಯವರೆಗೂ ಚಿತ್ರದ ಬಗ್ಗೆ ಕೊಂಚ ಸುಳಿವನ್ನು ಕೊಡದ ಚಿತ್ರತಂಡ ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ಗೋಧ್ರಾ ಚಿತ್ರದ ಟೀಸರ್ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದೆ.
ಸಮಾಜದಲ್ಲಿ ನಡೆಯುವ ಶೋಷಣೆಯ ವಿರುದ್ಧ ಬಂಡೆದ್ದು ಹೋರಾಟಗಾರನಾಗುವ ವ್ಯಕ್ತಿಯ ಕಥೆಯನ್ನು ಗೋಧ್ರಾ ಚಿತ್ರತಂಡ ಹೇಳ ಹೊರಟಿದೆ. ಸತೀಶ್ ನೀನಾಸಂ, ಶ್ರದ್ಧಾ ಶ್ರೀನಾಥ್ ಚಿತ್ರದಲ್ಲಿ ಪತ್ರಿಕೋಧ್ಯಮ ವಿದ್ಯಾರ್ಥಿಗಳಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್ ರಾಜಕರಣಿಯಾಗಿ, ವಸಿಷ್ಠ ಸಿಂಹ ಪೈಲೆಟ್ ಆಗಿ ಮಿಂಚಿದ್ದಾರೆ. ಕೆ.ಎಸ್.ನಂದೀಶ್ ಗೋಧ್ರಾ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ಜಾಕೋಬ್ ಫಿಲಮ್ಸ್, ಲೀಡರ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಚಿತ್ರ ನಿರ್ಮಾಣವಾಗುತ್ತಿದೆ.