ಮೈಸೂರು: ಎಲ್ಲೆಲ್ಲೂ ದೀಪಾವಳಿ ಹಬ್ಬದ ಸಡಗರ ಸಂಭ್ರಮ. ದೇವಾಲಯಗಳಲ್ಲಿ ಭಕ್ತರು ತುಂಬಿ ಹೋಗಿದ್ದಾರೆ. ನಗರದ ಒಂದು ದೇವಸ್ಥಾನದಲ್ಲಿ ನೋಟಿನ ಅಲಂಕಾರ, ಇನ್ನೊಂದೆಡೆ ನಾಡದೇವತೆಯ ಸನ್ನಿಧಾನದಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದೆ.
ಹಬ್ಬದ ಹಿನ್ನೆಲೆಯಲ್ಲಿ ಮೈಸೂರಿನ ದೇವರಾಜ ಮೊಹಲ್ಲಾದ ಅಮೃತೇಶ್ವರ ದೇವಸ್ಥಾನದಲ್ಲಿ ಬಾಲತ್ರಿಪುರ ಸುಂದರಿ ಅಮ್ಮನಿಗೆ ನೋಟಿನ ಅಲಂಕಾರ ಮಾಡಲಾಗಿದೆ. ಭಕ್ತರು ನೀಡಿದ ಕಾಣಿಕೆ ಹಣದಿಂದ 2 ಸಾವಿರ, 500, 200, 100, 50, 20, 10 ರೂಪಾಯಿ ಮುಖಬೆಲೆಯ ನೋಟುಗಳಿಂದ ವಿಭಿನ್ನ ಅಲಂಕಾರ ಮಾಡಲಾಗಿದೆ.
Advertisement
ತಾಯಿಯನ್ನು ಮಾತ್ರವಲ್ಲದೇ ದೇವರ ಗರ್ಭಗುಡಿಯನ್ನು ಸಹ ನೋಟಿನಿಂದ ಅಲಂಕಾರ ಮಾಡಲಾಗಿದ್ದು, ನೋಟಿನ ದೇವತೆ ನೋಡಲು ಅಪಾರ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಬಂದಿದ್ದಾರೆ.
Advertisement
Advertisement
ದೀಪಾವಳಿ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಇರುವ ಕಾರಣ ಚಾಮುಂಡಿಬೆಟ್ಟದಲ್ಲಿ ಭಕ್ತ ಸಾಗರವೇ ನೆರದಿದೆ. ದೀಪಾವಳಿಯ ದಿನ ಚಾಮುಂಡಿ ದೇವಿಯ ದರ್ಶನ ಪಡೆಯಲು ಸಾವಿರಾರು ಭಕ್ತರು ಬೆಟ್ಟಕ್ಕೆ ಬಂದಿದ್ದ ಕಾರಣ 3-4 ಕಿಲೋ ಮೀಟರ್ ಉದ್ದಕ್ಕೆ ವಾಹನಗಳು ನಿಂತಿದ್ದವು. ಆಷಾಢ ಮಾಸದಲ್ಲಿ ತಾಯಿಯ ದರ್ಶನ ಪಡೆಯುವುದಕ್ಕೆ ಬರುವ ಜನರಿಗಿಂತಾ ದುಪ್ಪಟ್ಟು ಭಕ್ತ ಸಾಗರ ಬೆಟ್ಟದಲ್ಲಿ ಸೇರಿತ್ತು.