ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ಬಾರಿಯ ಶಿವರಾತ್ರಿಯಂದು ಅಪಚಾರ ನಡೆದಿದೆ.
ಶಿವರಾತ್ರಿ ಉತ್ಸವ ಪ್ರಯುಕ್ತ ರಾತ್ರಿ ಬಲಿ ಉತ್ಸವ ನಡೆಯುತ್ತಿದ್ದಾಗ ದೇವರ ಮೂರ್ತಿಯನ್ನು ಹೊತ್ತ ಅರ್ಚಕರ ಶಿರದಿಂದ ಹಠಾತ್ತಾಗಿ ಉತ್ಸವ ಮೂರ್ತಿ ನೆಲಕ್ಕೆ ಬಿದ್ದಿದೆ. ಶಿವ ಜಾಗರಣೆಯ ದಿವಸವೇ ಇಂತಹ ಘಟನೆ ನಡೆದಿರುವುದು ಭಕ್ತರನ್ನು ದಿಗಿಲುಗೊಳಿಸಿದೆ. ಹೀಗಾಗಿ ದೇವಸ್ಥಾನದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಶಿವನಿಗೆ ಇಷ್ಟವಿರಲಿಲ್ಲ ಅನ್ನುವ ಮಾತು ಕೇಳಿಬಂದಿದೆ.
Advertisement
ದೇವಸ್ಥಾನಕ್ಕೆ ಸ್ವರ್ಣ ಲೇಪಿತ ಧ್ವಜ ಸ್ತಂಭ ಸ್ಥಾಪಿಸುವುದಕ್ಕಾಗಿ ಈ ಹಿಂದೆ ಇದ್ದ ಧ್ವಜ ಸ್ತಂಭವನ್ನು ತೆಗೆಯಲಾಗಿತ್ತು. ಆದರೆ, ಧ್ವಜ ಸ್ತಂಭ ಇಲ್ಲದೆ ದೇವರ ಬಲಿ ಉತ್ಸವ ನಡೆಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಪಂಡಿತರದ್ದಾಗಿತ್ತು. ಹೀಗಿದ್ದರೂ ಶಿವರಾತ್ರಿಯಂದು ಎಂದಿನಂತೆ ಬಲಿ ಉತ್ಸವ ನಡೆಸಿದ್ದು, ಇದೇ ವೇಳೆ ಉತ್ಸವ ಮೂರ್ತಿ ನೆಲಕ್ಕುರುಳಿ ಬಿಟ್ಟಿದೆ.
Advertisement
Advertisement
ಅಲ್ಲದೆ ಕೆಳಗೆ ಬಿದ್ದ ದೇವರ ಮೂರ್ತಿಯನ್ನು ಶುದ್ಧಿಕಲಶ ಮಾಡಿಸದೆ ಹಾಗೇ ಗರ್ಭಗುಡಿಯಲ್ಲಿ ಇಡಲಾಗಿದೆ ಎನ್ನಲಾಗುತ್ತಿದೆ. ಹತ್ತೂರಿಗೆ ಸಂಬಂಧಪಟ್ಟ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಾವುದೇ ಮಾರ್ಪಾಡು ನಡೆಸುವುದಿದ್ದರೂ, ಸಾರ್ವಜನಿಕವಾಗಿ ಎಲ್ಲರಿಗೂ ತಿಳಿಸಬೇಕಾಗುತ್ತೆ.
Advertisement
ಆದರೆ ಇತ್ತೀಚಿನ ದಿನಗಳಲ್ಲಿ ಅರ್ಚಕರು ಮತ್ತು ವ್ಯವಸ್ಥಾಪನಾ ಸಮಿತಿಯ ಕೆಲವರು ಸೇರಿಕೊಂಡು ಏಕಪಕ್ಷೀಯ ತೀರ್ಮಾನಗಳನ್ನು ತೆಗೆದುಕೊಳ್ತಿದ್ದಾರೆಂಬ ಆರೋಪಗಳಿವೆ. ಇದೀಗ ಬಲಿ ಉತ್ಸವ ನಡೀತಿರುವಾಗಲೇ ದೇವರ ಮೂರ್ತಿ ನೆಲಕ್ಕೆ ಬಿದ್ದಿದ್ದು ಶಿವ ಮುನಿದಿರುವ ಸಂಕೇತ ಎನ್ನಲಾಗುತ್ತಿದೆ. ಇಂತಹ ಬೆಳವಣಿಗೆ ಊರಿಗೆ ಅಪಶಕುನದ ಮುನ್ಸೂಚನೆ ಎಂಬ ಆತಂಕ ಜನರಲ್ಲಿ ಮನೆಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv