ಭುವನೇಶ್ವರ: ಮೇಕೆಯೊಂದು ಅಪಘಾತದಲ್ಲಿ ಸಾವನ್ನಪ್ಪಿದ್ದಕ್ಕೆ ಮಹಾನದಿ ಕೋಲ್‍ಫೀಲ್ಡ್ಸ್ ಲಿ.(ಎಂಸಿಎಲ್)ಗೆ 2.68 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಕಂಪನಿ ತಿಳಿಸಿದೆ.
ಓಡಿಶಾದಲ್ಲಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಮೇಕೆಯೊಂದು ಸಾವನ್ನಪ್ಪಿದ ನಂತರ ಸ್ಥಳೀಯರು ನಡೆಸಿದ ಪ್ರತಿಭಟನೆಯಿಂದಾಗಿ 2.68 ಕೋಟಿ ರೂ. ನಷ್ಟ ಸಂಭವಿಸಿದೆ.
Advertisement
ಏನಿದು ಪ್ರಕರಣ?
ಕಲ್ಲಿದ್ದಲು ಸಾಗಿಸುತ್ತಿದ್ದ ಟಿಪ್ಪರ್ ಗೆ ಸಿಲುಕಿ ಅಪಘಾತದಲ್ಲಿ ಮೇಕೆ ಸಾವನ್ನಪ್ಪಿತ್ತು. ಇದಕ್ಕೆ ಪರಿಹಾರ ರೂಪವಾಗಿ ಸ್ಥಳೀಯರು 60 ಸಾವಿರ ರೂ. ಬೇಡಿಕೆ ಇಟ್ಟಿದ್ದಾರೆ. ಇದಕ್ಕಾಗಿ ಟಾಲ್ಚರ್ ಕಲ್ಲಿದ್ದಲು ಪ್ರದೇಶದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿ ಕೋಲಾಹಲ ಸೃಷ್ಟಿಸಿದ್ದರಿಂದ ನಷ್ಟ ಉಂಟಾಗಿದೆ ಎಂದು ಎಂಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
Advertisement
Advertisement
ಪಕ್ಕದ ಹಳ್ಳಿಯ ನಿವಾಸಿಗಳ ನೇತೃತ್ವದ ಜನಸಮೂಹ ಸೋಮವಾರ ಬೆಳಗ್ಗೆ 11 ಗಂಟೆಯಿಂದ ಟಾಲ್ಚರ್ ಕಲ್ಲಿದ್ದಲು ಕ್ಷೇತ್ರಗಳಲ್ಲಿನ ಜಗನ್ನಾಥ ಸಿಡಿಂಗ್ಸ್ ನಂ.1 ಹಾಗೂ 2ರಲ್ಲಿ ಪ್ರತಿಭಟನೆ ನಡೆಸಿ ಕಲ್ಲಿದ್ದಲು ಸಾಗಣೆ ಮತ್ತು ರವಾನೆ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ. ಪ್ರತಿಭಟನೆ ಕುರಿತು ಮಾಹಿತಿ ತಿಳಿದು ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರು ಮಧ್ಯ ಪ್ರವೇಶಿಸಿ, ಪ್ರತಿಭಟನೆ ತಣ್ಣಗಾಗಿಸಲು ಮಧ್ಯಾಹ್ನ 2.30 ಆಗಿದ್ದು, ನಂತರ ಕೆಲಸ ಪುನರಾರಂಭಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ.
Advertisement
ಈ ಮೂರುವರೆ ಗಂಟೆಗಳ ಅಕ್ರಮ ಕೆಲಸ ಸ್ಥಗಿತದಿಂದಾಗಿ ಕಲ್ಲಿದ್ದಲು ಸಾಗಣೆಯಲ್ಲಿ 1.4 ಕೋಟಿ ರೂ. ಹಾಗೂ ರೈಲ್ವೇ ಮೂಲಕ ರವಾನೆಯಾಗುತ್ತಿದ್ದ ಕಲ್ಲಿದ್ದಲು ಸಾಗಣೆಯಲ್ಲಿ ತಡವಾಗಿದ್ದರಿಂದ 1.28 ಕೋಟಿ ರೂ. ನಷ್ಟವಾಗಿದೆ. ಒಟ್ಟು ಅಂದಾಜು 2.68 ಕೋಟಿ ರೂ.ಗಳ ನಷ್ಟದ ಜೊತೆಗೆ ಸರ್ಕಾರದ ಬೊಕ್ಕಸಕ್ಕೆ 46 ಲಕ್ಷ ರೂ. ನಷ್ಟವಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಕ್ರಮವಾಗಿ ಕೆಲಸಕ್ಕೆ ಅಡ್ಡಿಯುಂಟುಮಾಡಿದವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಕಂಪನಿಯೂ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದೆ. ಕಲ್ಲಿದ್ದಲು ಗಣಿಗಾರಿಕೆ ಕಾರ್ಯಾಚರಣೆಗೆ ಇಂತಹ ಅಕ್ರಮ ಅಡೆತಡೆಯಲು ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ವಿರುದ್ಧವಾಗಿದೆ. ಅಲ್ಲದೆ, ದೇಶದ ಐದು ಟ್ರಿಲಿಯನ್ ಆರ್ಥಿಕತೆ ಗುರಿಗೆ ಅಡೆತಡೆಗಳನ್ನು ಉಂಟುಮಾಡುತ್ತದೆ ಎಂದು ಎಂಸಿಎಲ್ ವಕ್ತಾರರು ತಿಳಿಸಿದ್ದಾರೆ.
ಕಲ್ಲಿದ್ದಲು ಗಣಿಗಾರಿಕೆ ಪ್ರದೇಶವನ್ನು ಕಾರ್ಯನಿರತ ವಲಯವನ್ನಾಗಿ ಗುರುತಿಸಲಾಗಿದೆ. ಇಲ್ಲಿ ಅಧಿಕೃತ ಚಲನೆ, ತರಬೇತಿ ಪಡೆದ ಮತ್ತು ಗಣಿಗಾರಿಕೆ ಕುರಿತು ಜ್ಞಾನ ಹೊಂದಿರುವವರಿಗೆ ಮಾತ್ರ ಕಾರ್ಯನಿರ್ವಹಿಸಲು ಅವಕಾಶವಿದೆ. ಜನಸಾಮಾನ್ಯರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದಾಗ್ಯೂ ಅಪರಿಚಿತರು ಹಾಗೂ ಇಲ್ಲಿನ ಸ್ಥಳೀಯರು ಕಲ್ಲಿದ್ದಲು ಪಡೆಯಲು ಹಾಗೂ ಕಟ್ಟಿಗೆ ಆಯ್ದುಕೊಳ್ಳಲು ಅಕ್ರಮವಾಗಿ ಪ್ರವೇಶಿಸುತ್ತಿದ್ದಾರೆ. ತಾವು ಬರುವುದಲ್ಲದೆ ತಮ್ಮ ಜಾನುವಾರುಗಳನ್ನೂ ಮೇಯಿಸಲು ತರುತ್ತಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ ಎಂದು ಸಂಸ್ಥೆಯ ವಕ್ತಾರರು ಆರೋಪಿಸಿದ್ದಾರೆ.