ಕಾರವಾರ: ಪ್ರವಾಸಿಗರ ಸ್ವರ್ಗ ಗೋವಾ ಎಂದೇ ಪ್ರಸಿದ್ಧ. ಹಾಗೆಯೇ ಕರ್ನಾಟಕದ ಕರಾವಳಿ ಭಾಗದ ಉತ್ತರ ಕನ್ನಡ ಜಿಲ್ಲೆಯೂ ಪ್ರವಾಸೋದ್ಯಮಕ್ಕೆ ಪ್ರಸಿದ್ಧ. ಪ್ರತಿ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ರಜೆಯ ಮೋಜು ಅನುಭವಿಸಲು ಕರಾವಳಿ ತೀರಾ ಹಾಗೂ ಗೋವಾ ರಾಜ್ಯಕ್ಕೆ ದೇಶ ವಿದೇಶಿಗರು ಮುಗಿ ಬೀಳುತ್ತಿದ್ದರು. ಆದರೆ ಈ ವರ್ಷ ದೇಶ, ವಿದೇಶಿಗರ ಪ್ರವಾಸಿ ಸಂಖ್ಯೆ ಇಳಿಮುಖವಾಗಿದೆ.
ಗೋವಾ ರಾಜ್ಯದಲ್ಲಿ ಹೊಸವರ್ಷದ ಸಂಭ್ರಮಾಚರಣೆಗೆ ದೇಶ ವಿದೇಶದ ಜನರು ಕಿಕ್ಕಿರಿದು ತುಂಬುತ್ತಿದ್ದರು. ಈ ವರ್ಷದ ಕ್ರಿಸ್‍ಮಸ್ ಆಚರಣೆಯ ಹಬ್ಬದಂದು ವಾರವಿಡೀ ಪ್ರವಾಸಿಗರ ನಿರೀಕ್ಷೆಯನ್ನು ಮಾಡಲಾಗಿತ್ತು. ಆದರೆ ನಿರೀಕ್ಷೆಯಂತೆ ಪ್ರವಾಸಿಗರು ಬರಲಿಲ್ಲ. ಕಳೆದ ಬಾರಿ ಹೋಲಿಸಿದರೆ ಈ ಬಾರಿ ಡಿಸೆಂಬರ್ ಅಂತ್ಯದಲ್ಲಿ ಪ್ರವಾಸಿಗರ ಆಗಮನದ ಸಂಖ್ಯೆ ಶೇ.50ರಷ್ಟು ಇಳಿಮುಖವಾಗಿದೆ.
Advertisement
Advertisement
ಗೋವಾ ರಾಜ್ಯಕ್ಕೆ ಪ್ರತಿ ವರ್ಷ 6 ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ ಎಂದು ಗೋವಾ ರಾಜ್ಯದ ಪ್ರವಾಸೋಧ್ಯಮ ಇಲಾಖೆ ಹೇಳುತ್ತದೆ. ಈ ಬಾರಿ ಹೊಸ ವರ್ಷಾಚರಣೆಗೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ ಎಂಬುದರ ಬಗ್ಗೆ ಅಂಕಿ ಅಂಶ ಕಲೆ ಹಾಕಲಾಗಿದೆ. ಅದರ ಪ್ರಕಾರ ಈ ವರ್ಷದ ಡಿಸೆಂಬರ್ ನಲ್ಲಿ ಶೇ.50ರಷ್ಟು ಕಮ್ಮಿಯಾಗಿರುವ ಕುರಿತು ಮಾಹಿತಿ ನೀಡಿದೆ.
Advertisement
ಗೋವಾ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳಲು ಕಾರಣಗಳು:
ದೇಶದಲ್ಲಿ ಪ್ರತಿಭಟನೆ ಹೆಚ್ಚಾಗಿತ್ತು. ಜೊತೆಗೆ ಇಂದು ಗೋವಾದಲ್ಲಿ ಮಹದಾಯಿ ಹೋರಾಟ ಪ್ರತಿಭಟನೆ ದೊಡ್ಡ ಮಟ್ಟದಲ್ಲಿ ನಡೆಸಲು ಅಲ್ಲಿನ ಸಂಘಟನೆಗಳು ಕರೆಕೊಟ್ಟಿದ್ದರು. ಇದರ ಜೊತೆ ದೇಶ ವಿದೇಶದಿಂದ ಪ್ರವಾಸಿಗರನ್ನು ಕರೆ ತರುತ್ತಿದ್ದ ಪ್ರವಾಸೋಧ್ಯಮ ಕಂಪನಿಗಳು ಆರ್ಥಿಕ ಸಂಕಟದಿಂದ ಮುಚ್ಚಿರುವುದು ಕೂಡ ಗೋವಾ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ.
Advertisement
ನೆರೆಯ ಗೋವಾಕ್ಕೆ ಹೋಲಿಸಿದರೆ ಕರ್ನಾಟಕದ ಕರಾವಳಿ ಭಾಗ ಅಲ್ಪ ಮಟ್ಟಿಗೆ ಖುಷಿ ಪಡಬಹುದು. ಉತ್ತರ ಕನ್ನಡ ಜಿಲ್ಲೆ ಗೋವಾ ರಾಜ್ಯವನ್ನು ಅಂಟಿಕೊಂಡಿದೆ. ಹೀಗಾಗಿ ಗೋವಾಕ್ಕೆ ಪ್ರತಿ ವರ್ಷ ಹೊಸ ವರ್ಷಾಚರಣೆ ಮಾಡುವ ಪ್ರವಾಸಿಗರು ಇಲ್ಲಿನ ಗೋಕರ್ಣ, ಕಾರವಾರ, ಮುರಡೇಶ್ವರದತ್ತ ಮುಖ ಮಾಡುತ್ತಾರೆ. ಈ ಬಾರಿ ಕಳೆದ ಬಾರಿಗಿಂತ ಇಳಿಮುಖವಾಗಿದ್ದು, ಜನರಲ್ಲಿ ಆಸಕ್ತಿ ಕಡಿಮೆ ಮಾಡಿದೆ. 2018ರ ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಪ್ರಕಾರ, ದೇಶಿಯರ ಪ್ರವಾಸಿಗರ ಸಂಖ್ಯೆ 6,10,994, ವಿದೇಶಿಗರ ಪ್ರವಾಸಿಗರು -2023 ಒಟ್ಟು 6,13,016 ಲಕ್ಷ ಜನ ಡಿಸೆಂಬರ್ ತಿಂಗಳಲ್ಲಿ ಭೇಟಿ ನೀಡಿದ್ದಾರೆ. ಆದರೆ 2019ರ ಪ್ರಕಾರ ದೇಶಿಯ ಪ್ರವಾಸಿಗರು – 5,21,880 ವಿದೇಶಿಯ ಪ್ರವಾಸಿಗರು 3839, ಒಟ್ಟು 5,25,719 ಇದ್ದು ಈ ಬಾರಿ ಇಳಿಮುಖವಾಗಿದೆ.
ವಿದೇಶಿ ಪ್ರವಾಸಿಗರಲ್ಲಿ ಏರಿಕೆ
ಕಳೆದ ಬಾರಿ ಹೋಲಿಸಿದರೆ ಈ ಬಾರಿ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. 2018 ಡಿಸೆಂಬರ್ ರಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳವಾದ ಗೋಕರ್ಣಕ್ಕೆ 836, ಓಂ ಬೀಚ್ 625, ಮುರಡೇಶ್ವರ 395, ಕಾರವಾರ ಕಡಲ ತೀರ 94 ಜನ ಭೇಟಿ ನೀಡಿದ್ದು, ಒಟ್ಟು ವಿದೇಶಿ ಪ್ರವಾಸಿಗರು 2023 ಆಗಿದೆ. 2019 ಡಿಸೆಂಬರ್ ನಲ್ಲಿ ಗೋಕರ್ಣಕ್ಕೆ 2568, ಓಂ ಬೀಚ್ 650, ಮುರಡೇಶ್ವರ 347, ಕಾರವಾರ 100, ಕಾಸರಕೋಡು ಬೀಚ್ 150 ಒಟ್ಟು ವಿದೇಶಿಯ ಪ್ರವಾಸಿಗರು 3839 ಆಗಿದ್ದು, ಕಳೆದ ಬಾರಿಗಿಂತ ಈ ಬಾರಿ ಏರಿಕೆ ಕಂಡಿದೆ.
ಹೊಸ ವರ್ಷಕ್ಕಿಲ್ಲ ಸೆಲಬ್ರೇಷನ್:
ಕಳೆದ ವರ್ಷ ದೊಡ್ಡ ದೊಡ್ಡ ಪಾರ್ಟಿಯನ್ನು ಆಯೋಜನೆ ಮಾಡುವ ಮೂಲಕ ಹೊಸ ವರ್ಷಾಚರಣೆಯನ್ನು ವಿಜ್ರಂಭಣೆಯಿಂದ ಆಚರಣೆ ಮಾಡಲಾಗಿತ್ತು. ಇದಕ್ಕಾಗಿ ಖಾಸಗಿ ಹೋಟಲ್, ರೆಸಾರ್ಟ್ ಗಳಲ್ಲಿ ಮ್ಯೂಸಿಕಲ್ ಪಾರ್ಟಿ ಸಹ ಇರುತ್ತಿತ್ತು. ಆದರೆ ಕೇಂದ್ರ ಸರ್ಕಾರದ ಜಿ.ಎಸ್‍ಟಿ ಹಾಗೂ ಮನೋರಂಜನಾ ಶುಲ್ಕ ಆಯೋಜಕರಿಗೆ ದುಬಾರಿಯಾಗಿದ್ದು, ಇದರ ಜೊತೆ ಪ್ರವಾಹದಿಂದ ಜಿಲ್ಲೆಗೆ ಆದ ಹಾನಿಗಳಿಂದ ಜನರಲ್ಲಿ ಆರ್ಥಿಕ ಸಮಸ್ಯೆ ಉಂಟಾಗಿದೆ. ಈ ಕಾರಣದಿಂದ ಕಾರವಾರದಲ್ಲಿ ಕೇವಲ ಒಂದು ಹೋಟೆಲ್, ಗೋಕರ್ಣದಲ್ಲಿ ಒಂದು ರೆಸಾರ್ಟ್ ಹೊರತುಪಡಿಸಿ ಉಳಿದ ಭಾಗದಲ್ಲಿ ಹೊಸ ವರ್ಷಾಚರಣೆಯ ಕಾರ್ಯಕ್ರಮಗಳು ಆಯೋಜನೆ ಗೊಂಡಿಲ್ಲ. ಒಟ್ಟಿನಲ್ಲಿ ಈ ವರ್ಷದ ಹೊಸ ವರ್ಷಾಚರಣೆ ಪ್ರವಾಸಿಗರ ಸ್ವರ್ಗದ ನಾಡಿನಲ್ಲಿ ಬಿಕೋ ಎನ್ನಿಸುತ್ತಿದ್ದು, ಹೊಸ ವರ್ಷವನ್ನು ಬರಮಾಡಿಕೊಳ್ಳುವ ಉತ್ಸುಕತೆ ಜನರಲ್ಲಿ ಅಷ್ಟಾಗಿ ಕಾಣುತ್ತಿಲ್ಲ.