ಪಣಜಿ: 65 ವರ್ಷದ ಕಲಾವಿದರೊಬ್ಬರನ್ನು ತೋಟದ ಕೆಲಸಗಾರ ಕೊಲೆ ಮಾಡಿ ಎಸ್ಕೇಪ್ ಆಗುವ ಭರದಲ್ಲಿ ತಾನೆ ಹೆಣವಾದ ಘಟನೆ ಗೋವಾದಲ್ಲಿ ನಡೆದಿದೆ.
ಮುಂಬೈ ಮೂಲದ ಚಿತ್ರಕಲಾವಿದರಾದ ಶಿರಿನ್ ಮೋಡಿ(65) ಕೊಲೆಯಾದ ದುರ್ದೈವಿ. ಮನೆಯೊಳಗೆ ಮಾರಕಾಸ್ತ್ರಗಳಿಂದ ಅವರ ತೋಟದ ಮಾಲಿ ಪ್ರಫುಲ್ಲಾ ಶಿರಿನ್‍ರನ್ನು ಕೊಲೆ ಮಾಡಿದ್ದಾನೆ. ಉತ್ತರ ಗೋವಾ ಜಿಲ್ಲೆಯ ಅರಪೊರಾ ಗ್ರಾಮದಲ್ಲಿ ಶಿರಿನ್ ಆರ್ಟ್ ಸ್ಟುಡಿಯೋ ಹೊಂದಿದ್ದರು. ಹೀಗಾಗಿ ಅವರು ಮುಂಬೈ ಬಿಟ್ಟು ಅರಪೊರಾ ಗ್ರಾಮದಲ್ಲೇ ವಾಸಿಸುತ್ತಿದ್ದರು.
ಅವರ ತೋಟದಲ್ಲಿ ಅಸ್ಸಾಂ ಮೂಲದ ಪ್ರಫುಲ್ಲಾ ತೋಟದ ಮಾಲಿಯಾಗಿ ಕೆಲಸ ಮಾಡುತ್ತಿದ್ದನು. ಆದರೆ ಭಾನುವಾರ ಪ್ರಫುಲ್ಲಾ ಮನೆಯೊಳಗೆ ಮಾರಕಾಸ್ತ್ರಗಳಿಂದ ಶಿರಿನ್ ಅವರ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿ, ಬಳಿಕ ಅಲ್ಲಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಗಾರ್ಡ್‌ನ್ ನಲ್ಲಿ ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ.
ಈ ವೇಳೆ ಗಾರ್ಡ್‌ನ್ ನಲ್ಲಿ ಬಿದ್ದಿದ್ದ ಮಾಲಿಯನ್ನು ಕಂಡ ಅಕ್ಕಪಕ್ಕದ ಮನೆಯವರು ಆತನನ್ನು ಆಸ್ಪತ್ರಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಷ್ಟರಲ್ಲಿ ಆರೋಪಿ ಮೃತಪಟ್ಟಿದ್ದನು. ಬಳಿಕ ಈ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದರು.
ಆಗ ಅಕ್ಕಪಕ್ಕದ ಮನೆಯವರು, ಮಾಲಿ ಹಾಗೂ ಶಿರಿನ್ ಅವರ ನಡುವೆ ಜಗಳ ನಡೆದಿತ್ತು. ಬಳಿಕ ಮಾಲಿ ಮನೆಯಿಂದ ಹೊರಗೆ ಓಡಿಬರುತ್ತಿದ್ದಾಗ ಆಯತಪ್ಪಿ ಬಿದ್ದು ಸಾವನ್ನಪ್ಪಿದ. ಬಹುಶಃ ಆತನೇ ಶಿರಿನ್‍ರನ್ನು ಕೊಲೆ ಮಾಡಿ ತಪ್ಪಿಸಿಕೊಳ್ಳಲು ಓಡಿ ಬರುತ್ತಿದ್ದನು ಎನಿಸುತ್ತದೆ ಎಂದು ಪೊಲೀಸರ ಬಳಿ ಹೇಳಿದ್ದಾರೆ.
ಇತ್ತ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದು, ಘಟನೆ ನಡೆದ ಬಳಿಕ ಮಾಲಿ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದು ಕಂಡು ಬಂದಿದೆ. ಆತ ಮನೆಯಿಂದ ಹೊರಗೆ ಓಡಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕೊಲೆ ಮಾಡಲು ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆದರೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.