ವಿಜಯ್ ರಾಘವೇಂದ್ರ ಅಭಿನಯದ ‘ಗ್ರೇ ಗೇಮ್ಸ್’ (Gray Games) ಚಿತ್ರವು ಇತ್ತೀಚೆಗಷ್ಟೇ ಮುಕ್ತಾಯವಾದ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (Chirotsava) (IFFI) ರೆಡ್ ಕಾರ್ಪೆಟ್ ಗಾಲಾ ಪ್ರೀಮಿಯರ್ ವಿಭಾಗದಲ್ಲಿ ಪ್ರದರ್ಶನವಾಗಿದೆ. ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಗಂಗಾಧರ್ ಸಾಲಿಮಠ (Gangadhar Salimath) ನಿರ್ದೇಶನದ ಈ ಚಿತ್ರಕ್ಕೆ ನೆರೆದಿದ್ದ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುವುದರ ಜೊತೆಗೆ ಒಳ್ಳೆಯ ವಿಮರ್ಶೆಗಳು ಸಿಕ್ಕಿವೆ.
Advertisement
ಮೆಟಾವರ್ಸ್ ಮತ್ತು ಆನ್‍ಲೈನ್ ಗೇಮಿಂಗ್ ವೈಷಮ್ಯದ ಹಿನ್ನೆಲೆಯಲ್ಲಿ ನಿರ್ಮಾಣವಾಗಿರುವ ‘ಗ್ರೇ ಗೇಮ್ಸ್’ ಚಿತ್ರದಲ್ಲಿ ವಿಜಯ್ ರಾಘವೇಂದ್ರ (Vijaya Raghavendra) ಸೈಕಾಲಜಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಭಾವನಾ ರಾವ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಶ್ರುತಿ ಪ್ರಕಾಶ್ ಈ ಚಿತ್ರದಲ್ಲಿ ಒಬ್ಬ ನಟಿಯಾಗಿ ಅಭಿನಯಿಸಿದ್ದು, ಈ ಚಿತ್ರದ ಮೂಲಕ ವಿಜಯ್ ರಾಘವೇಂದ್ರ ಅವರ ಅಕ್ಕನ ಮಗ ಜೈ, ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವುದರ ಜೊತೆಗೆ, ಇಲ್ಲಿ ಒಬ್ಬ ಗೇಮರ್ ಆಗಿ ಕಾಣಿಸಿಕೊಂಡಿದ್ದಾರೆ.
Advertisement
Advertisement
ಗೋವಾ ಚಿತ್ರೋತ್ಸವದಲ್ಲಿ ಚಿತ್ರ ಪ್ರದರ್ಶನವಾಗಿದ್ದರ ಕುರಿತು ಸಂತೋಷ ವ್ಯಕ್ತಪಡಿಸಿರುವ ನಿರ್ದೇಶಕ ಗಂಗಾಧರ್ ಸಾಲಿಮಠ್, ‘ಚಿತ್ರೋತ್ಸವದಲ್ಲಿ ನಮ್ಮ ಚಿತ್ರಕ್ಕೆ ಸಿಕ್ಕ ಪ್ರೋತ್ಸಾಹ ಮತ್ತು ವಿಮರ್ಶೆಗಳಿಂದ ನಿಜಕ್ಕೂ ಹೃದಯ ತುಂಬಿಬಂದಿದೆ. ಇಂಥದ್ದೊಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ಚಿತ್ರವನ್ನು ಪ್ರದರ್ಶಿಸುವುದಕ್ಕೆ ಅವಕಾಶ ಸಿಕ್ಕಿದ್ದು ಅತ್ಯಂತ ಗೌರವದ ವಿಷಯ. ಇದೊಂದು ಫ್ಯಾಮಿಲಿ ಸಸ್ಪೆನ್ಸ್ ಡ್ರಾಮಾ ಚಿತ್ರವಾಗಿದ್ದು, ವರ್ಚ್ಯುಯಲ್ ಮತ್ತು ನೈಜತೆ ನಡುವೆ ಯಾವುದು ಸರಿ, ಯಾವುದು ತಪ್ಪು ಎಂಬ ನಮ್ಮ ದೃಷ್ಟಿಕೋನದ ಕುರಿತು ಸವಾಲು ಎಸೆಯುವಂತಿದೆ’ ಎನ್ನುತ್ತಾರೆ.
Advertisement
ನಿರ್ಮಾಪಕ ಆನಂದ್ ಎಚ್. ಮುಗುದ್ ಮಾತನಾಡಿ, ‘ನಮ್ಮ ಚಿತ್ರವನ್ನು ನೋಡಿ ಅತ್ಯುತ್ತಮ ವಿಮರ್ಶೆಗಳನ್ನು ನೀಡಿದ ಪ್ರೇಕ್ಷಕರಿಗೆ ಧನ್ಯವಾದಗಳು. ಇದು ನಮ್ಮ ತಂಡದ ಶ್ರದ್ಧೆ ಮತ್ತು ಒಳ್ಳೆಯ ಚಿತ್ರ ನೀಡಬೇಕೆನ್ನುವ ಬದ್ಧತೆಗೆ ಸಿಕ್ಕ ಗೌರವ’ ಎಂದು ಹೇಳುತ್ತಾರೆ. ‘ಗ್ರೇ ಗೇಮ್ಸ್’ ಚಿತ್ರಕ್ಕೆ ಸರೀಶ್ ಗ್ರಾಮಪುರೋಹಿತ್, ಅರವಿಂದ್ ಜೋಷಿ ಮತ್ತು ಡೋಲೇಶ್ವರ್ ರಾಜ್ ಸುಂಕು ಸಹನಿರ್ಮಾಪಕರಾಗಿದ್ದು, ಚಿತ್ರವು ಫೆಬ್ರವರಿ 2024ಕ್ಕೆ ಬಿಡುಗಡೆ ಆಗಲಿದೆ.