ಪಣಜಿ: ಫೆಬ್ರವರಿ 14ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕ್ರಿಶ್ಚಿಯನ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಸ್ಪರ್ಧಿಸದಿರಲು ಬಿಜೆಪಿ ತಿರ್ಮಾನಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಗೋವಾದ 40 ವಿಧಾನಸಭಾ ಸ್ಥಾನಗಳ ಪೈಕಿ 38 ರಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಪಕ್ಷದ ಹಿರಿಯ ನಾಯಕರೊಬ್ಬರ ಮಾಹಿತಿಯ ಪ್ರಕಾರ, ಕ್ರಿಶ್ಚಿಯನ್ ಪ್ರಾಬಲ್ಯವಿರುವ ಕ್ಷೇತ್ರಗಳಾದ ಬೆನೌಲಿಮ್ ಮತ್ತು ನುವೆಮ್‌ನಿಂದ ಬಿಜೆಪಿ ಸ್ಪರ್ಧಿಸುತ್ತಿಲ್ಲ. ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧದ ಪಕ್ಷಕ್ಕೆ ಜನರು ಮತ ಚಲಾಯಿಸುವ ಕಾರಣಕ್ಕೆ ಈ ಬಾರಿ ಆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸದಿರಲು ಬಿಜೆಪಿ ತಿರ್ಮಾನಿಸಿದೆ. ಇದನ್ನೂ ಓದಿ: ನಿಮ್ಮ ಮಕ್ಕಳು, ನೀವು ಸಾಯುತ್ತೀರಿ: ಪೊಲೀಸರನ್ನು ಶಪಿಸಿದ ದ್ವೇಷ ಭಾಷಣ ಕೇಸ್ ಆರೋಪಿ
ಪ್ರಸ್ತುತ ಬೆನೌಲಿಮ್ ಕ್ಷೇತ್ರವನ್ನು ಚರ್ಚಿಲ್ ಅಲೆಮಾವೊ ಪ್ರತಿನಿಧಿಸುತ್ತಿದ್ದಾರೆ. ಅವರು ಕಳೆದ ಬಾರಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ದಿಂದ ಆಯ್ಕೆಯಾಗಿದ್ದರು. ಕಳೆದ ತಿಂಗಳು ಅವರು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರ್ಪಡೆಯಾಗಿದ್ದಾರೆ. ನುವೆಮ್ ಕ್ಷೇತ್ರವನ್ನು ವಿಲ್ಫ್ರೆಡ್ ಡಿಸಾ ಅವರು ಪ್ರತಿನಿಧಿಸುತ್ತಿದ್ದು, ಅವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿದ್ದರು. ಈಗ ಆಡಳಿತಾರೂಢ ಬಿಜೆಪಿ ಸೇರಿದ್ದಾರೆ.
ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ಬಿಜೆಪಿ ಕೋರ್ ಕಮಿಟಿಯ ಸಭೆಗಳನ್ನು ನಡೆಸಿತ್ತು. ಗೋವಾ ಚುನಾವಣೆಗೆ ಪಕ್ಷದ ಉಸ್ತುವಾರಿಯಾಗಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಸದಾನಂದ ಶೇಟ್ ತನವಡೆ ಮತ್ತು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೇರಿದಂತೆ ಇತರರ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ದಲಿತ ಮತಗಳ ಮೇಲೆ ಕಣ್ಣು- ಎರಡು ಕ್ಷೇತ್ರಗಳಲ್ಲಿ ಸಿಎಂ ಚನ್ನಿ ಸ್ಪರ್ಧೆ?
ಜನವರಿ 15 ರಂದು ದೆಹಲಿಗೆ ಭೇಟಿ ನೀಡಲಿರುವ ಕೋರ್ ಕಮಿಟಿ ಸದಸ್ಯರು ವರಿಷ್ಠರೊಂದಿಗೆ ಸಭೆ ನಡೆಸಲಿದ್ದಾರೆ. ಹೈಕಮಾಂಡ್ ಒಪ್ಪಿಗೆಯ ಬಳಿಕ ಜನವರಿ 16 ರಂದು ಒಂದೇ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ.