ಗೋವಾ ಸಿಎಂ ಮನೋಹರ್ ಪರಿಕ್ಕರ್ ವಿಧಿವಶ

Public TV
2 Min Read
Manohar Parrikar 1

ಪಣಜಿ: ತೀವ್ರ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ. ಪಣಜಿಯಲ್ಲಿರುವ ಮಗನ ನಿವಾಸದಲ್ಲಿ ಪರಿಕ್ಕರ್ ಸಂಜೆ ವಿಧಿವಶರಾಗಿದ್ದಾರೆ.

63 ವರ್ಷದ ಮನೋಹರ್ ಪರಿಕ್ಕರ್ ಕಳೆದ ಒಂದು ವರ್ಷದಿಂದ ಪ್ಯಾಂಕ್ರಿಯಾಟಿಕ್ ಕಾಯಿಲೆ (ಮೆದೋಜೀರಕ ಗೃಂಥಿ ಸಮಸ್ಯೆ)ಯಿಂದ ಬಳಲುತ್ತಿದ್ದರು. ಅಲ್ಲದೇ ಕಳೆದ ವರ್ಷ ಅಮೆರಿಕದಲ್ಲಿ 3 ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದ ಅವರು ಸೆ.6 ರಂದು ಚೇತರಿಸಿಕೊಂಡು ಮತ್ತೆ ತಾಯ್ನಾಡಿಗೆ ಮರಳಿದ್ದರು.

Manohar Parrikar

ಗೋವಾ, ಮುಂಬೈ, ನವದೆಹಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಅವರ ಮೂಗಿಗೆ ಪೈಪ್ ಅಳವಡಿಸಲಾಗಿತ್ತು. ಹಾಗಿದ್ದರೂ ಕೂಡ ಬಜೆಟ್ ಅಧಿವೇಶದಲ್ಲಿ ಭಾಗವಹಿಸಿ ಬಜೆಟ್ ಮಂಡನೆ ಮಾಡಿದ್ದರು.

ಗೋವಾದ ತಮ್ಮ ಖಾಸಗಿ ನಿವಾಸದಲ್ಲೇ ಹೆಚ್ಚಿನ ಸಮಯ ವಿಶ್ರಾಂತಿ ಪಡೆದು ಚೇತರಿಸಿಕೊಳ್ಳುತ್ತಿದ್ದ ಅವರು ಅಲ್ಲಿಂದಲೇ ಸರ್ಕಾರದ ಆಡಳಿತವನ್ನು ನಿರ್ವಹಿಸುತ್ತಿದ್ದರು. ಆದರೆ ಫೆಬ್ರವರಿ ಅಂತ್ಯದಲ್ಲಿ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದರು. ಅಂದಿನಿಂದಲೂ ಅವರ ಆರೋಗ್ಯದ ಮೇಲೆ ನಿಗಾವಹಿಸಿದ್ದ ವೈದ್ಯರ ತಂಡ ಸೂಕ್ತ ಚಿಕಿತ್ಸೆ ನೀಡುತ್ತಿದ್ದರು. ಗೋವಾದ ಸಚಿವರು ಪರಿಕ್ಕರ್ ಅವರ ಆರೋಗ್ಯ ಗಂಭೀರವಾಗಿದ್ದು, ವೈದ್ಯರು ಕರ್ತವ್ಯವನ್ನು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು.

ಏನಿದು ಪ್ಯಾಂಕ್ರಿಯಾಸ್ ಕಾಯಿಲೆ?:
ಪ್ಯಾಂಕ್ರಿಯಾಸ್ ಮಾನವ ದೇಹದ ಪ್ರಮುಖ ಅಂಗವಾಗಿದ್ದು, ಎರಡು ಪ್ರಮುಖ ಹಾರ್ಮೋನ್ ಗಳಾದ ಇನ್ಸುಲಿನ್, ಗ್ಲೂಕಾಗಾನ್ ಗಳ ಉತ್ಪಾದನೆ ಮೂಲಕ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಹೊಣೆಗಾರಿಕೆ ಹೊಂದಿದೆ. ಹೊಟ್ಟೆಯ ಭಾಗದಲ್ಲಿ ಕರುಳು ಮತ್ತು ಜಠರದ ಆಳವಾದ ಹಿಂಭಾಗದಲ್ಲಿರುವ ಪ್ಯಾಂಕ್ರಿಯಾಸ್ ಗಳನ್ನು ಕಾಡುವ ಹಲವಾರು ರೋಗಗಳ ಪೈಕಿ ಕ್ಯಾನ್ಸರ್ ಅತ್ಯಂತ ಮಾರಕವಾಗಿದೆ.

1955 ಡಿಸೆಂಬರ್ 13 ರಂದು ಜನಿಸಿದ ಪರಿಕ್ಕರ್ 1978 ರಲ್ಲಿ ಬಾಂಬೆ ಐಐಟಿಯಿಂದ ಪದವಿಯನ್ನು ಪಡೆದಿದ್ದರು. ಯುವಕರಾಗಿದ್ದ ವೇಳೆಯೇ ಅವರು ಆರ್ ಆರ್ ಎಸ್ ನಲ್ಲಿ ಗುರುತಿಸಿಕೊಂಡಿದ್ದರು. ಆ ಬಳಿಕ ಭಾರತೀಯ ಜನತಾ ಪಕ್ಷದ ಪ್ರಮುಖ ನಾಯಕರದಲ್ಲಿ ಒಬ್ಬರಾಗಿ ಬೆಳೆದರು.

1994 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಗಿ ಆಯ್ಕೆ ಆಗಿದ್ದ ಅವರು, 2000 ಇಸವಿಯಿಂದ 2005 ಹಾಗೂ 2012 ರಿಂದ 2014ರ ವರೆಗೂ ಗೋವಾ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ 2017 ಮಾರ್ಚ್ 14 ರಂದು ಮತ್ತೆ ಗೋವಾ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದರು.

2013 ಲೋಕಸಭಾ ಚುನಾವಣೆಗೂ ಮುನ್ನ ಮನೋಹರ್ ಪರಿಕ್ಕರ್ ಬಿಜೆಪಿಯಿಂದ ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗಿಯೂ ಗುರುತಿಸಿಕೊಂಡಿದ್ದರು. ಆದರೆ 2014 ಚುನಾವಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೇಶದ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. 2017ರ ಮಾರ್ಚ್ ವರೆಗೂ ಸಚಿವರಾಗಿ ಮುಂದುವರೆದಿದ್ದರು, ಆದರೆ ಗೋವಾ ರಾಜ್ಯ ರಾಜಕೀಯದಲ್ಲಿ ನಡೆದ ಬದಲಾವಣೆಗಳ ಕಾರಣದಿಂದ ಮತ್ತೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು.

Manohar Parrikar

Share This Article
Leave a Comment

Leave a Reply

Your email address will not be published. Required fields are marked *