ಲಕ್ನೋ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅವರು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರವಾದ ಉತ್ತರ ಪ್ರದೇಶದ ಅಮೇಠಿಯ ರೈತರು ಗೋ ಬ್ಯಾಕ್ ಇಟಲಿ ಚಳುವಳಿ ಆರಂಭಿಸಿದ್ದಾರೆ.
ಅಮೇಠಿ ಜಿಲ್ಲೆಯ ಗೌರಿಗಂಜ್ ನಗರದಲ್ಲಿ ಸಾವಿರಾರು ರೈತರು ಬುಧವಾರ ರಾಹುಲ್ ಗಾಂಧಿ ವಿರುದ್ಧ ಘೋಷಣೆ ಕೂಗಿದರು. ಬಳಿಕ ರಾಜೀವ್ ಗಾಂಧಿ ಫೌಂಡೇಷನ್‍ಗೆ ಪಡೆದ ಭೂಮಿಯನ್ನು ರೈತರಿಗೆ ಮರಳಿಸಿ, ಇಲ್ಲವೇ ಅವರಿಗೆ ಉದ್ಯೋಗ ಒದಗಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಲೋಕಸಭಾ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಬುಧವಾರ ರಾಹುಲ್ ಗಾಂಧಿ ಅಮೇಠಿಗೆ ಭೇಟಿ ನೀಡಿದ್ದರು. ಈ ವೇಳೆ ರೈತರು ರಾಜೀವ್ ಗಾಂಧಿ ಅವರು ಉದ್ಘಾಟಿಸಿದ್ದ ಸಾಮ್ರಾಟ್ ಸೈಕಲ್ ಫ್ಯಾಕ್ಟರಿಯ ಬಳಿ ನಿಂತು ಪ್ರತಿಭಟನೆ ನಡೆಸಿದರು.
ರಾಹುಲ್ ಗಾಂಧಿ ನಮ್ಮ ಭೂಮಿಯನ್ನು ಕಬಳಿಸಿದ್ದಾರೆ. ಅವರು ಇಲ್ಲಿ ಇರಲು ಯಾವುದೇ ಅರ್ಹತೆ ಹೊಂದಿಲ್ಲ. ಅವರು ಭಾರತದಲ್ಲಿ ಇರುವುದು ಬೇಡ, ಇಟಲಿಗೆ ವಾಪಸ್ ಹೋಗಲಿ ಎಂದು ಪ್ರತಿಭಟನಾನಿರತ ಸಂಜಯ್ ಸಿಂಗ್ ಆಕ್ರೋಶ ಹೊರಹಾಕಿದ್ದಾರೆ.
ರೈತರ ಆಕ್ರೋಶಕ್ಕೆ ಕಾರಣ ಏನು?
ಜೈನ್ ಸಹೋದರರ ಸೈಕಲ್ ಕಂಪನಿಯ ಫ್ಯಾಕ್ಟರಿ ಘಟಕ ತೆರೆಯಲು ಉತ್ತರ ಪ್ರದೇಶ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ(ಯುಪಿಎಸ್‍ಐಡಿಸಿ) 1980 ರಲ್ಲಿ 65.57 ಎಕ್ರೆ ಜಾಗವನ್ನು ಗುತ್ತಿಗೆ ನೀಡಿತ್ತು. ಮಾರುಕಟ್ಟೆಯಲ್ಲಿ ನಷ್ಟ ಉಂಟಾಗಿ ಫ್ಯಾಕ್ಟರಿ 1986 ರಲ್ಲಿ ಮುಚ್ಚಲ್ಪಟ್ಟಿತ್ತು. 2014 ರಲ್ಲಿ ಡೆಟ್ ರಿಕವರಿ ಟ್ರಿಬ್ಯೂನಲ್ ಸಾಲವನ್ನು ಭರಿಸಲು ಈ ಜಾಗವನ್ನು ಹರಾಜು ಹಾಕಲು ಆದೇಶಿಸಿತ್ತು.
ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ 1.50 ಲಕ್ಷ ರೂ. ಮೂಲ ಠೇವಣಿ ಇಟ್ಟು ಈ ಜಾಗವನ್ನು ಹರಾಜಿನ ಮೂಲಕ ಖರೀದಿಸಿತ್ತು. ಆದರೆ ಗೌರಿಗಂಜ್ ಎಸ್‍ಡಿಎಂ ಕೋರ್ಟ್ ಹರಾಜು ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಿ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿ ಸೈಕಲ್ ಕಂಪನಿಯ ಜಾಗವನ್ನು ಯುಪಿಎಸ್‍ಐಡಿಸಿಗೆ ಹಸ್ತಾಂತರಿಸಬೇಕೆಂದು ಆದೇಶಿಸಿತ್ತು. ಈ ಆದೇಶದ ಬಳಿಕ ದಾಖಲೆಗಳಲ್ಲಿ ಮಾತ್ರ ಯುಪಿಎಸ್‍ಐಡಿಸಿ ಹೆಸರಿದ್ದರೆ ಈಗಲೂ ಈ ಜಾಗ ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ವಶದಲ್ಲಿದೆ.
ಈ ಹಿಂದೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಹುಲ್ ಗಾಂಧಿ ತಮ್ಮ ಟ್ರಸ್ಟ್ ಗ ರೈತರಿಂದ ಭೂಮಿ ಪಡೆದು ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv