ಮುಂಬೈ: ಗಣೇಶ ಚತುರ್ಥಿಗೆ ಬಿಡುಗಡೆಯಾಗಬೇಕಿದ್ದ ಕಡಿಮೆ ಬೆಲೆಯ ಜಿಯೋ ಆಂಡ್ರಾಯ್ಡ್ ಫೋನ್ ದೀಪಾವಳಿ ಮೊದಲು ಬಿಡುಗಡೆಯಾಗಲಿದೆ.
ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಜಿಯೋ, ಈ ಫೋನ್ ಈಗ ಪ್ರಯೋಗದ ಹಂತದಲ್ಲಿದೆ. ದೀಪಾವಳಿಗೆ ಮೊದಲು ಬಿಡುಗಡೆಯಾಗಲಿದೆ ಎಂದು ತಿಳಿಸಿದೆ.
Advertisement
ಜೂನ್ ತಿಂಗಳಿನಲ್ಲಿ ನಡೆದ ರಿಲಯನ್ಸ್ ಇಂಡಸ್ಟ್ರೀಸ್ 44ನೇ ವಾರ್ಷಿಕ ಸಭೆಯಲ್ಲಿ ಮುಖ್ಯಸ್ಥ ಮುಕೇಶ್ ಅಂಬಾನಿ, ಗಣೇಶ ಚತುರ್ಥಿ ಸಮಯದಲ್ಲಿ ಗೂಗಲ್ ಜೊತೆಗೂಡಿ ಕಡಿಮೆ ಬೆಲೆಯ ಜಿಯೋ ಫೋನ್ ನೆಕ್ಸ್ಟ್ ಫೋನ್ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದರು.
Advertisement
Advertisement
ಈಗ ವಿಶ್ವಾದ್ಯಂತ ಎಲ್ಲ ಕಂಪನಿಗಳಿಗೆ ಚಿಪ್ ಅಭಾವ ಕಾಡುತ್ತಿದೆ. ಸೆಮಿಕಂಡಕ್ಟರ್ ಕೊರತೆ ಜಿಯೋ ಫೋನಿಗೆ ತಟ್ಟಿದ್ದು ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ.
Advertisement
ಭಾರತದಲ್ಲಿ ಮಾತ್ರವೇ ಅಲ್ಲದೆ ಇಡೀ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಆಗಿರಲಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದರು. ರಿಲಯನ್ಸ್ ಇಂಡಸ್ಟ್ರೀಸ್ 44ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ್ದ ಗೂಗಲ್ ಸಿಇಒ ಸುಂದರ್ ಪಿಚೈ, ಈ ಸ್ಮಾರ್ಟ್‍ಫೋನ್ ಭಾರತಕ್ಕೆಂದೇ ನಿರ್ಮಿಸಲಾಗಿದ್ದು, ಮೊತ್ತಮೊದಲ ಬಾರಿಗೆ ಅಂತರಜಾಲ ಬಳಸುವ ಲಕ್ಷಾಂತರ ಹೊಸ ಬಳಕೆದಾರರಿಗೆ ಅದು ಹೊಸ ಸಾಧ್ಯತೆಗಳನ್ನು ತೆರೆದಿಡಲಿದೆ ಎಂದು ಹೇಳಿದ್ದರು.
ಫೋನಿನಲ್ಲಿ ಏನಿರಲಿದೆ?
ವಾಯ್ಸ್ ಅಸಿಸ್ಟೆಂಟ್, ಪರದೆಯ ಮೇಲಿನ ಪಠ್ಯವನ್ನು ಓದಿ ಹೇಳುವ ಸೌಲಭ್ಯ, ಅನುವಾದ ಸೌಲಭ್ಯ, ಆಗ್ಮೆಂಟೆಡ್ ರಿಯಾಲಿಟಿ ಫಿಲ್ಟರ್ ಗಳಿರುವ ಸ್ಮಾರ್ಟ್ ಕ್ಯಾಮೆರಾ ಇರಲಿದೆ. ಗೂಗಲ್ ಹಾಗೂ ಜಿಯೋ ಅಪ್ಲಿಕೇಶನ್ ಅಲ್ಲದೆ ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿರುವ ಆಪ್ ಗಳನ್ನು ಬಳಸಬಹುದಾಗಿದೆ.
ಕಡಿಮೆ ಬೆಲೆಯ ಫೋನಿನಲ್ಲಿ ಕ್ಯಾಮೆರಾ ಗುಣಮಟ್ಟ ಅಷ್ಟೇನೂ ಉತ್ತಮ ಇರುವುದಿಲ್ಲ. ಆದರೆ ಗೂಗಲ್ ಈ ಫೋನಿಗೆ ಫಾಸ್ಟ್ ಹೈ ಕ್ವಾಲಿಟಿ ಕ್ಯಾಮೆರಾ ನೀಡುವುದಾಗಿ ಹೇಳಿದೆ. ಅಲ್ಲದೇ ಎಚ್‍ಡಿಆರ್ ಮೋಡ್ ಇರಲಿದೆ. ಗೂಗಲ್ ಸ್ನಾಪ್‍ಚಾಟ್ ಜೊತೆಗೂಡಿ ಹೊಸ ಲೆನ್ಸ್ ಅಭಿವೃದ್ಧಿ ಪಡಿಸಿದೆ. ಹೀಗಾಗಿ ಉತ್ತಮ ಗುಣಮಟ್ಟದ ಕ್ಯಾಮೆರಾ ಇರುವ ಸಾಧ್ಯತೆಯಿದೆ. ಗೂಗಲ್ ಈ ಜಿಯೋ ಫೋನಿಗೆ ಲೇಟೆಸ್ಟ್ ಆಂಡ್ರಾಯ್ಡ್ ಓಎಸ್ ಭದ್ರತಾ ನವೀಕರಣಗಳನ್ನು ನೀಡುವುದಾಗಿ ಭರವಸೆ ನೀಡಿದೆ. ಆದರೆ ಯಾವ ಆಂಡ್ರಾಯ್ ಆವೃತ್ತಿ ಇರಲಿದೆ ಎನ್ನುವುದು ಸಷ್ಟವಾಗಿ ತಿಳಿದು ಬಂದಿಲ್ಲ. ಇದನ್ನೂ ಓದಿ: ಜಿಯೋದಲ್ಲಿ ಯಾರ ಹೂಡಿಕೆ ಎಷ್ಟಿದೆ?
ಬೆಲೆ ಎಷ್ಟು?
ಜಿಯೋ ಫೋನ್ ಬೆಲೆ ಎಷ್ಟು ಎನ್ನುವುದನ್ನು ಮುಕೇಶ್ ಅಂಬಾನಿ ತಿಳಿಸಿಲ್ಲ. ಆದರೆ ಕಡಿಮೆ ಬೆಲೆ ಎಂಬ ಸುಳಿವು ನೀಡಿದ ಹಿನ್ನೆಲೆಯಲ್ಲಿ 4-5 ಸಾವಿರ ರೂ. ಒಳಗಡೆ ಇರಬಹುದು ಎಂದು ಅಂದಾಜಿಸಲಾಗಿದೆ. ಇನ್‍ಬಿಲ್ಟ್ ಜಿಯೋ ಸಿಮ್ ಇರುವ ಕಾರಣ ಈ ಫೋನ್ ಬಳಕೆದಾರರಿಗೆ ಜಿಯೋ ವಿಶೇಷ ಡೇಟಾ ಪ್ಲ್ಯಾನ್ ಬಿಡುಗಡೆ ಮಾಡುವ ಸಾಧ್ಯತೆಯಿದೆ.
2017ರ ಜನವರಿಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಭಾರತಕ್ಕೆ ಬಂದಿದ್ದಾಗ ಕಡಿಮೆ ಬೆಲೆಯಲ್ಲಿ ಆಂಡ್ರಾಯ್ಡ್ ಫೋನ್ ತಯಾರಿಸಲಾಗುವುದು ಎಂದು ತಿಳಿಸಿದ್ದರು. ಭಾರತಕ್ಕೆ 30 ಡಾಲರ್(2 ಸಾವಿರ ರೂ.) ಬೆಲೆಯ ಆಂಡ್ರಾಯ್ಡ್ ಫೋನ್ ಅಗತ್ಯವಿದೆ ಎಂದು ಹೇಳಿದ್ದರು. ಇದಕ್ಕೆ ಪೂರಕ ಎಂಬಂತೆ ಜಿಯೋ ಕಂಪನಿ ಮತ್ತು ಗೂಗಲ್ ಜೊತೆಗೂಡಿ ಆಂಡ್ರಾಯ್ಡ್ ಫೋನ್ ತಯಾರಿಸಲಿದೆ ಎಂದು ಟೆಕ್ ಮೂಲಗಳ ಮಾಹಿತಿಯನ್ನು ಆಧರಿಸಿ ಅಂದೇ ವರದಿ ಪ್ರಕಟವಾಗಿತ್ತು.