ನವದೆಹಲಿ: ರಾಜ್ಯ ಕಾಂಗ್ರೆಸ್ (Congress) ಸರ್ಕಾರವು ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಗಳಲ್ಲಿ ಶೇ.4ರಷ್ಟು ಮೀಸಲಾತಿ ಘೋಷಿಸಿದ ವಿಷಯವು ಲೋಕಸಭೆಯಲ್ಲಿ ಬುಧವಾರ ಚರ್ಚೆಗೆ ಆಸ್ಪದ ನೀಡಿ, ಕೆಲಕಾಲ ಗೊಂದಲಕ್ಕೆ ಕಾರಣವಾಯಿತು.
ಗಮನ ಸೆಳೆಯುವ ಸೂಚನೆಯ ಸಂದರ್ಭದಲ್ಲಿ, ಜಾರ್ಖಂಡ್‌ನ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಈ ವಿಷಯವನ್ನು ಪ್ರಸ್ತಾಪಿಸಿದರು. ಕಾಂಗ್ರೆಸ್ ಸರ್ಕಾರವು ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಗಳಲ್ಲಿ ಶೇ.4ರಷ್ಟು ಮೀಸಲಾತಿ ನೀಡಲು ಮುಂದಾಗಿದೆ. ಈಗಾಗಲೇ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಇರುವಾಗ, ಧರ್ಮದ ಆಧಾರದಲ್ಲಿ ಹೊಸ ಮೀಸಲಾತಿ ನೀಡುವುದು ಕಾನೂನುಬಾಹಿರವಾಗಿದೆ ಎಂದರು.ಇದನ್ನೂ ಓದಿ: ಹಿಂದೂ ಯುವತಿ ಹತ್ಯೆ ಕೇಸ್ – ಸ್ವಾತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ
ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಡಿಮೆ ಮಾಡಿ, ಮುಸ್ಲಿಮರಿಗೆ ಹಂಚುವ ಉದ್ದೇಶ ಇದರ ಹಿಂದಿದೆ. ವಿರೋಧ ಪಕ್ಷಗಳು ಮತ ಬ್ಯಾಂಕ್ ರಾಜಕಾರಣಕ್ಕಾಗಿ ಮುಸ್ಲಿಮರನ್ನು ಓಲೈಸುತ್ತಿವೆ. ತೆಲಂಗಾಣದಲ್ಲಿ ಒಬಿಸಿ ಪಟ್ಟಿಗೆ ಮುಸ್ಲಿಮರನ್ನು ಸೇರಿಸುವ ಯತ್ನವೂ ನಡೆದಿದೆ. ಈ ವೇಳೆ ಬಿಜೆಪಿ ಸದಸ್ಯರು “ನಾಚಿಕೆಗೇಡು” ಎಂದು ಕೂಗಲು ಪ್ರಾರಂಭಿಸಿದರೆ, ಕಾಂಗ್ರೆಸ್ ಸದಸ್ಯರು ಇದಕ್ಕೆ ಪ್ರತಿರೋಧ ತೋರಿದರು. ಇದರಿಂದ ಸಭೆಯಲ್ಲಿ ಗದ್ದಲ ಉಂಟಾಯಿತು.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಪ್ರತಿಕ್ರಿಯಿಸಿ, ಇದು ಗಂಭೀರ ವಿಷಯವಾಗಿದ್ದು, ಸಂಸದರು ತಮ್ಮ ಆತಂಕವನ್ನು ಸದನ ಮತ್ತು ಸಚಿವಾಲಯಕ್ಕೆ ಮಂಡಿಸುತ್ತಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಈ ನಿರ್ಧಾರವನ್ನು ಖಂಡಿಸಿ, “ಸರ್ಕಾರಿ ಟೆಂಡರ್‌ಗಳಲ್ಲಿ ಶೇ.4ರಷ್ಟು ಮೀಸಲಾತಿ ನೀಡುವುದು ಮುಸ್ಲಿಮರ ತುಷ್ಟೀಕರಣಕ್ಕೆ ಸಾಕ್ಷಿಯಾಗಿದೆ. ಜಾತ್ಯತೀತ ಸರ್ಕಾರಕ್ಕೆ ಧರ್ಮ ಆಧಾರಿತ ಓಲೈಕೆಗೆ ಯಾವುದೇ ಅಧಿಕಾರವಿಲ್ಲ. ಇದು ನಿಷೇಧಿತ ಪಿಎಫ್‌ಐ ಮತ್ತು ಕೆಎಫ್‌ಡಿಯಂತಹ ಸಂಘಟನೆಗಳನ್ನು ಬಲಗೊಳಿಸುವ ಒಂದು ತಂತ್ರವಾಗಿದೆ. ಈ ಮೀಸಲಾತಿ ಮಸೂದೆ ಸಂವಿಧಾನ ವಿರೋಧಿಯಾಗಿದೆ. ಇದನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಇದನ್ನೂ ಓದಿ: IPL ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ ಬಾಲಿವುಡ್ ತಾರೆಯರು