ಚಿಕ್ಕಮಗಳೂರು: ಕೊಡಗು ನಿರಾಶ್ರಿತ ನೂರಾರು ಕುಟುಂಬಗಳಿಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಮುಖದಲ್ಲಿ ತಾತ್ಕಾಲಿಕ ವಸತಿ ಸೌಲಭ್ಯ ಕಲ್ಪಿಸುವ ಎಲ್ಲಾ ಸೌಕರ್ಯಗಳು ನೀಡುವಂತೆ ಕಳಸಾದ ಜನರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕೊಡಗಿನಲ್ಲಿ ಸುರಿದ ಮಹಾಮಳೆಗೆ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ. ನೆಲೆ ನಿಲ್ಲೋಕೆ ಒಂದು ಸೂರಿಲ್ಲದೆ ನಿರಾಶ್ರಿತರಾಗಿರೋ ನೂರಾರು ಕುಟುಂಬಗಳಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಸರ್ಕಾರ ಏನೇ ಆಶ್ವಾಸನೆ, ಭರವಸೆ ನೀಡಿದರೂ ಅವರಿಗೆ ಎಲ್ಲಾ ಸೌಕರ್ಯ ಒದಗಿಸಲು ವರ್ಷಗಳೇ ಬೇಕು. ಪುನರ್ವಸತಿ ಕೆಲಸ ಆರಂಭಿಸಲು ಕನಿಷ್ಟ ಮಳೆಗಾಲವಂತೂ ಮುಗಿಯಲೇಬೇಕು. ಮಳೆಗಾಲ ಮುಗಿಯೋದು ಯಾವಾಗ, ಏನೋ ಅನ್ನೋ ಭಯ ಜನ ಹಾಗೂ ಸರ್ಕಾರ ಇಬ್ಬರಿಗೂ ಇದೆ.
ಕುದುರೆಮುಖದಲ್ಲಿ ಐರನ್ ಅಂಡ್ ಓರ್ ಕಂಪನಿ ಲಿಮಿಟೆಡ್‍ಗೆ ಸೇರಿದ 1800 ಕ್ಕೂ ಅಧಿಕ ಮನೆಗಳಿದ್ದು, ರಸ್ತೆ ಸಂಚಾರ, ವಿದ್ಯುತ್ ಸೌಲಭ್ಯ, ನೀರಿನ ಸೌಲಭ್ಯ, ಮತ್ತು ಸಾಧಾರಣವಾಗಿ ವಿಕೋಪಕ್ಕೆ ಸಿಲುಕುವಂತಹ ಸ್ಥಳವಲ್ಲ ಅಷ್ಟೇ ಅಲ್ಲದೇ ಸದ್ಯಕ್ಕೆ ಅವೆಲ್ಲಾ ಪಾಳು ಬಿದ್ದಿವೆ. 15 ವರ್ಷದ ಹಿಂದೆಯೇ ಕೆಐಓಸಿಎಲ್ ಕಂಪನಿ ಸ್ಥಗಿತಗೊಂಡಿದೆ. ಹಾಗಾಗಿ ಆ ಮನೆಗಳನ್ನ ದುರಸ್ತಿ ಮಾಡಿ ಕೊಡಗಿನ ನಿರಾಶ್ರಿತರಿಗೆ ತಾತ್ಕಾಲಿಕವಾಗಿ ನೀಡಬೇಕೆಂದು ಕಳಸಾದ ಜನರು ಒತ್ತಾಯಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv