ನವದೆಹಲಿ: ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ತುಂಗಭದ್ರಾ ಎಡದಂಡೆ ಕಾಲುವೆ, ಘಟಪ್ರಭಾ ಬಲದಂಡೆ ಪ್ರಮುಖ ಕಾಲುವೆ, ಕೃಷ್ಣಾ ಮೇಲ್ದಂಡೆ ಯೋಜನೆಯ ಇಂಡಿ ಕಾಲುವೆ, ಮಲಪ್ರಭಾ ಕಾಲುವೆಗಳ ವಿಸ್ತರಣೆ, ನವೀಕರಣ, ಆಧುನೀಕರಣಗೊಳಿಸಲು ಹಾಗೂ ಸೋಂತಿ ಏತ ನೀರಾವರಿ ಯೋಜನೆಗಳಿಗೆ ಅಗತ್ಯವಿರುವ ಅನುಮತಿ ಹಾಗೂ ಅನುದಾನ ನೀಡುವಂತೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರಿಗೆ ರಾಜ್ಯ ಜಲಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar) ಮನವಿ ಮಾಡಿದರು.
Advertisement
ನವದೆಹಲಿಯಲ್ಲಿ (Newdelhi) ಕೇಂದ್ರ ಸಚಿವರನ್ನು ಭೇಟಿ ಮಾಡಿದ ಡಿಕೆಶಿ ಅವರು, ನೆನೆಗುದಿಗೆ ಬಿದ್ದಿರುವ ರಾಜ್ಯದ ಯೋಜನೆಗಳಿಗೆ ಅನುದಾನ ಹಾಗೂ ಅನುಮತಿ ನೀಡಲು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ರಾಜ್ಯ ಸಣ್ಣ ನೀರಾವರಿ ಸಚಿವ ಬೋಸರಾಜು, ದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತಾ, ಮತ್ತಿತರರು ಉಪಸ್ಥಿತರಿದ್ದರು.ಇದನ್ನೂ ಓದಿ: ಕೋರ್ಟ್ ಹಾಲ್‌ನಲ್ಲಿ ಪವಿತ್ರಾ, ದರ್ಶನ್ ದೂರ ದೂರಾ – ಕಣ್ಣೀರಿಡುತ್ತ ತೆರಳಿದ ಗೆಳತಿ!
Advertisement
Advertisement
ಭದ್ರಾ ಎಡದಂಡೆ ಕಾಲುವೆಯ ವಿಸ್ತರಣೆ, ನವೀಕರಣ, ಆಧುನೀಕರಣಗೊಳಿಸುವ ಯೋಜನೆಗೆ ಕರ್ನಾಟಕ ಸರ್ಕಾರವು ಈಗಾಗಲೇ ಕೇಂದ್ರ ಜಲ ಆಯೋಗಕ್ಕೆ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಿದೆ. ತುಂಗಭದ್ರಾ ಎಡದಂಡೆ ಕಾಲುವೆಯು 226 ಕಿ.ಮೀ ಉದ್ದ ಹರಿಯಲಿದ್ದು, ಉತ್ತರ ಕರ್ನಾಟಕದ 2,44,103 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಒದಗಿಸಲಿದೆ. ಈ ಯೋಜನೆಯಿಂದಾಗಿ ಕಾಲುವೆಯ ಕೊನೆ ಭಾಗದ ರೈತರಿಗೂ ನೀರು ಸಮನಾಂತರವಾಗಿ ಹಂಚಿಕೆಯಾಗಲಿದೆ. ಜೊತೆಗೆ 96,400 ಹೆಕ್ಟೇರ್ ಪ್ರದೇಶದ ರೈತರಿಗೆ ನೆರವಾಗಲಿದೆ. ಈ ಯೋಜನೆಗೆ 1,444.42 ಕೋಟಿ ರೂ.ಗಳ ಅನುದಾನ ಅಗತ್ಯವಿದೆ. ಪ್ರಧಾನಮಂತ್ರಿ ಕೃಷಿ ಸಿಂಚಯೀ ಯೋಜನೆ- ವೇಗವರ್ಧಿತ ನೀರಾವರಿ ಪ್ರಯೋಜನಗಳ ಕಾರ್ಯಕ್ರಮ ಅಡಿಯಲ್ಲಿ ಈ ಯೋಜನೆಗಳಿಗೆ ಅನುದಾನ ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ.
Advertisement
Met Union Jal Shakti Minister Shri. @CRPaatil and Union Minister of State for the Ministry of Jal Shakti Shri. @VSOMANNA_BJP in Delhi, urging them to approve and allocate funds for the pending water projects- Mekedatu & Upper Bhadra and other major projects in Karnataka.… pic.twitter.com/laRxwjETPy
— DK Shivakumar (@DKShivakumar) February 25, 2025
ಘಟಪ್ರಭಾ ಬಲದಂಡೆ ಪ್ರಮುಖ ಕಾಲುವೆಯ 199.09 ಕಿ.ಮೀವರೆಗೆ ಹಾಗೂ ಚಿಕ್ಕೋಡಿ ಭಾಗದ ಕಾಲುವೆ 30 ಕಿ.ಮೀ.ನಿಂದ 88.25 ಕಿ.ಮೀ.ವರೆಗೆ ಕಾಲುವೆಗಳ ವಿಸ್ತರಣೆ, ನವೀಕರಣ, ಆಧುನೀಕರಣಗೊಳಿಸಲು ಕರ್ನಾಟಕ ಸರ್ಕಾರ ಫೆ.10,2025 ರಂದುವಿಸ್ತೃತ ಯೋಜನಾ ವರದಿಯನ್ನು ಸಲ್ಲಿಕೆ ಮಾಡಿದೆ. ಇದರಿಂದ ಈ ಭಾಗದ ರೈತರಿಗೆ ನೀರನ್ನು ಸಮರ್ಪಕವಾಗಿ ಪೂರೈಸಲು ನೆರವಾಗಲಿದ್ದು, ಈ ಯೋಜನೆಗೆ ಪಿಎಂಕೆಎಸ್ ವೈ-ಎಐಬಿಪಿ ಯೋಜನೆ ಅಡಿಯಲ್ಲಿ 1,596.98 ಕೋಟಿ ರೂ.ಗಳ ಅನುದಾನ ಒದಗಿಸಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಭಾರತ ಸರ್ಕಾರದ ಪ್ರವಾಹ ನಿರ್ವಹಣೆ ಮತ್ತು ಗಡಿ ಪ್ರದೇಶ ಕಾರ್ಯಕ್ರಮ ಯೋಜನೆ ಅಡಿಯಲ್ಲಿ ಬೆಣ್ಣಿಹಳ್ಳದಿಂದ ಮಲಪ್ರಭಾದ ಸಂಗಮದವರೆಗೂ ಪ್ರವಾಹ ನಿಯಂತ್ರಣ ಹಾಗೂ ಪ್ರವಾಹ ನಿರ್ವಹಣೆಯ ಕಾಮಗಾರಿಯನ್ನು ನಡೆಸಲು ಅಗತ್ಯವಿರುವ 1,610.00 ಕೋಟಿ ರೂ. ಅನುದಾನವನ್ನು ನೀಡಬೇಕು. ಈ ವಿಚಾರವಾಗಿ ರಾಜ್ಯ ಸರ್ಕಾರವು ದಿನಾಂಕ ಫೆ.10,2025ರಂದು ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಕೆ ಮಾಡಿದೆ. ಈ ಭಾಗದಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅಕಾಲಿಕ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಲಿದ್ದು, ನೀರಿನ ಮಟ್ಟ ಹೆಚ್ಚಾಗಿ ನದಿಯ ಹರಿವು ಬೇರೆಡೆಗೆ ತಿರುಗುತ್ತದೆ. ಇದರಿಂದ ಪ್ರವಾಹ ಉಂಟಾಗಿ ಜನಜೀವನ ಅಸ್ಥವ್ಯಸ್ಥವಾಗುತ್ತಿದೆ. ಹೀಗಾಗಿ ಜಲಶಕ್ತಿ ಸಚಿವಾಲಯದ ಕೇಂದ್ರ ಜಲ ಆಯೋಗದ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಬೇಕು ಹಾಗೂ ಕೇಂದ್ರ ಸರ್ಕಾರದ ಕಾರ್ಯಕ್ರಮದಡಿಯಲ್ಲಿ ಅನುದಾನ ನೀಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.ಇದನ್ನೂ ಓದಿ: ಪಂಜಾಬ್‌ನ ಆಪ್ ಸರ್ಕಾರದಿಂದ ಬುಲ್ಡೋಜರ್ ಅಸ್ತ್ರ – ಡ್ರಗ್ ಮಾಫಿಯಾ ಕಿಂಗ್‌ಗಳ ಮನೆ ನೆಲಸಮ
ಸೋಂತಿ ಏತ ನೀರಾವರಿ ಯೋಜನೆಯು ಸೋಂತಿ ಬ್ಯಾರೇಜ್‌ನಿಂದ ನೀರನ್ನು ಎತ್ತಿ ಕಾಲುವೆಗಳ ಮೂಲಕ ಬರಪೀಡಿತ ಚಿತ್ತಾಪುರ, ಯಾದಗಿರಿ ತಾಲೂಕಿನಲ್ಲಿ 16,000 ಹೆಕ್ಟೇರ್ ಕೃಷಿ ಭೂಮಿಗೆ 4 ಟಿಎಂಸಿ ನೀರನ್ನು ಒದಗಿಸುವ ಯೋಜನೆಯಾಗಿದೆ. ರಾಜ್ಯ ಸರ್ಕಾರವು ಈಗಾಗಲೇ ಈ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಕೆ ಮಾಡಿದ್ದು, ಮೇ.25,2015ರಂದು ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ತಾಂತ್ರಿಕ ಸಲಹಾ ಸಮಿತಿಯ 125ನೇ ಸಭೆಯಲ್ಲಿ 673.90 ಕೋಟಿ ರೂ. ಮೊತ್ತದ ಡಿಪಿಆರ್‌ಗೆ ಅನುಮೋದನೆ ನೀಡಲಾಗಿತ್ತು. ನಂತರ 2017ರಲ್ಲಿ ಈ ಯೋಜನೆಗೆ ಅರಣ್ಯ ಇಲಾಖೆ ಅನುಮತಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಈ ಯೋಜನೆಯ ಮೊತ್ತ 804.66 ರೂ.ಗೆ ಏರಿಕೆಯಾಗಿದ್ದು, ಪಿಎಂಕೆಎಸ್ ವೈ-ಎಐಬಿಪಿ ಯೋಜನೆ ಅಡಿಯಲ್ಲಿ ಈ ಅನುದಾನ ನೀಡಬೇಕು. ಜೊತೆಗೆ ಅಗತ್ಯವಿರುವ ಅನುಮತಿಯನ್ನು ನೀಡಲು ಕೇಂದ್ರ ಜಲ ಆಯೋಗದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಪ್ರಮುಖ ಭಾಗವಾಗಿರುವ 172 ಕಿ.ಮೀ ಉದ್ದದ ಇಂಡಿ ಕಾಲುವೆ ಯೋಜನೆಯು ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಯ 1.31 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶಕ್ಕೆ ನೀರಾವರಿ ಒದಗಿಸಲಿದೆ. ಹೀಗಾಗಿ ಕರ್ನಾಟಕ ಸರ್ಕಾರ ಇಂಡಿ ಕಾಲುವೆಯ 64.00 ಕಿ.ಮೀ.ನಿಂದ 172.00ವರೆಗೂ ವಿಸ್ತರಣೆ, ನವೀಕರಣ, ಆಧುನೀಕರಣಗೊಳಿಸಲು ತೀರ್ಮಾನಿಸಿದ್ದು, ಈ ಯೋಜನೆಗಾಗಿ 2666.70 ಕೋಟಿ ರೂ. ಮೊತ್ತದ ಪೂರ್ವ ಕಾರ್ಯಸಾಧ್ಯತಾ ವರದಿಯನ್ನು ದಿನಾಂಕ ಫೆ,20,2025ರಂದು ಸಲ್ಲಿಸಲಾಗಿದೆ. ಈ ಪೂರ್ವ ಕಾರ್ಯಸಾಧ್ಯತಾ ವರದಿಯನ್ನು ಪರಿಗಣಿಸಿ, ಪಿಎಂಕೆಎಸ್ ವೈ-ಎಐಬಿಪಿ ಯೋಜನೆ ಅಡಿಯಲ್ಲಿ ಈ ಯೋಜನೆಗೆ ಅನುದಾನ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.
ಇನ್ನೂ ಮಲಪ್ರಭಾ ಕಾಲುವೆ ಯೋಜನೆಯ ಮೂರನೇ ಹಂತದಲ್ಲಿ ಕಾಲುವೆಗಳ ವಿಸ್ತರಣೆ, ನವೀಕರಣ, ಆಧುನೀಕರಣಗೊಳಿಸಲು ತೀರ್ಮಾನಿಸಿದ್ದು, ಇದಕ್ಕಾಗಿ 3,000.00 ಕೋಟಿ ರೂ.ಗಳು ಅಗತ್ಯವಿದೆ. ಇದರ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಲಾಗಿದೆ. ಈ ಯೋಜನೆಯಿಂದ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಹೀಗಾಗಿ ಸಚಿವಾಲಯವು ಡಿಪಿಆರ್‌ಗೆ ಅನುಮತಿ ನೀಡಿ ಈ ಯೋಜನೆಗೆ ಅಗತ್ಯವಿರುವ ಅನುಮತಿಯನ್ನು ಕೊಡಿಸುವಂತೆ ಕೇಂದ್ರ ಜಲ ಆಯೋಗದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಜತೆಗೆ ಈ ಯೋಜನೆಗೆ ಅಗತ್ಯವಾಗಿರುವ ಅನುದಾನವನ್ನು ಪಿಎಂಕೆಎಸ್ ವೈ-ಎಐಬಿಪಿ ಯೋಜನೆ ಅಡಿಯಲ್ಲಿ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.ಇದನ್ನೂ ಓದಿ: ಮಹಾ ಶಿವರಾತ್ರಿಯಂದು ಭೇಟಿ ನೀಡಬಹುದಾದ ದಕ್ಷಿಣ ಕರ್ನಾಟಕದ ಪುರಾಣ ಪ್ರಸಿದ್ಧ ದೇವಾಲಯಗಳು