CinemaKarnatakaLatestMain PostSandalwoodTV Shows

ಅನಿರುದ್ಧಗೆ ಮತ್ತೆ ಅವಕಾಶ ಕೊಡಿ, ವಾಹಿನಿ ಮುಂದೆ ಅಭಿಮಾನಿಗಳು ಪ್ರತಿಭಟನೆ

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಲು ಅನಿರುದ್ಧ ಅವರಿಗೆ ಮತ್ತೆ ಅವಕಾಶ ನೀಡಬೇಕು ಎಂದು ಅನಿರುದ್ಧ ಅಭಿಮಾನಿಗಳು ಜೀ ಕನ್ನಡ ವಾಹಿನಿಯ ಮುಂದೆ ಪ್ರತಿಭಟನೆ ನಡೆಸಿದರು. ಏಕಾಏಕಿ ಒಬ್ಬ ನಟನಿಗೆ ಹೀಗೆ ಮಾಡುವುದು ಸರಿಯಲ್ಲ. ನಿರ್ಮಾಪಕರ ಮತ್ತು  ಅನಿರುದ್ಧ ನಡುವಿನ ಸಮರಕ್ಕೆ, ವಾಹಿನಿಯು ಮಧ್ಯಸ್ತಿಕೆ ವಹಿಸಿ ಸರಿ ಮಾಡಬೇಕು ಎಂದು ಅಭಿಮಾನಿಗಳು ಮನವಿ ಮಾಡಿದರು. ಆರ್ಯವರ್ಧನ್ ಪಾತ್ರಕ್ಕೆ ಇನ್ನೂ ಯಾರೂ ಆಯ್ಕೆ ಆಗದೇ ಇರುವ ಕಾರಣಕ್ಕಾಗಿ ಮತ್ತೆ ಅನಿರುದ್ಧ ಅವರನ್ನೇ ವಾಪಸ್ಸು ಕರೆಯಿಸಿಕೊಳ್ಳಿ ಎಂಬ ಬೇಡಿಕೆ ಇಟ್ಟರು.

ಜೊತೆ ಜೊತೆಯಲಿ ಧಾರಾವಾಹಿಯ ನಿರ್ಮಾಪಕರಿಗೂ ಮತ್ತು ಅನಿರುದ್ಧ ಅವರಿಗೂ ವೈಮನಸ್ಸಿನ ಕಾರಣದಿಂದಾಗಿ ಅನಿರುದ್ಧ ಅವರನ್ನೂ ಸೀರಿಯಲ್ ನಿಂದ ಕೈ ಬಿಡಲಾಗಿದೆ. ಅನಿರುದ್ಧ ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರವನ್ನು ಕಥೆಯಲ್ಲೇ ಹಾಗೆಯೇ ಜೀವಂತವಾಗಿಟ್ಟು, ಹೊಸ ಪಾತ್ರಗಳ ಮೂಲಕ ಕಥೆಯನ್ನು ಹೇಳಲಾಗುತ್ತಿದೆ. ಹೊಸ ಪಾತ್ರ ಬಂದರೂ, ಆರ್ಯವರ್ಧನ್ ಪಾತ್ರವೂ ಕಥೆಯಲ್ಲಿದೆ. ಹಾಗಾಗಿ ಮತ್ತೆ ಅನಿರುದ್ಧ ಧಾರಾವಾಹಿ ತಂಡ ಸೇರಿಕೊಳ್ಳಲಿ ಎನ್ನುವುದು ಅಭಿಮಾನಿಗಳ ಆಸೆ. ಇದನ್ನೂ ಓದಿ: ‘ಶ್ಯಾನುಭೋಗರ ಮಗಳಾ’ದ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ

ಅನಿರುದ್ಧ ಅವರನ್ನು ಕೇವಲ ಸೀರಿಯಲ್ ನಿಂದ ಮಾತ್ರ ಕೈ ಬಿಟ್ಟಿಲ್ಲ. ಮತ್ತೆ ಅವರೊಂದಿಗೆ ಯಾರೂ ಕೆಲಸ ಮಾಡದಂತೆ, ಟೆಲಿವಿಷನ್ ಅಸೋಷಿಯೇಷನ್ ನಿರ್ಮಾಪಕರ ಸಂಘವು ನಿರ್ಣಯ ತಗೆದುಕೊಂಡಿದೆ. ಒಂದು ರೀತಿಯಲ್ಲಿ ಅದು ಬ್ಯಾನ್ ಎನ್ನಲಾಗುತ್ತಿದೆ. ಹೀಗಾಗಿ ಮತ್ತೆ ಅನಿರುದ್ಧ ಅವರನ್ನು ಸೀರಿಯಲ್ ತಂಡದಲ್ಲಿ ಸೇರಿಸಿಕೊಳ್ಳುವುದು ಕಷ್ಟ ಎನ್ನಲಾಗುತ್ತಿದೆ. ಮತ್ತೆ ಪಾತ್ರ ಮಾಡಲು ಅನಿರುದ್ಧ ಅವರಿಗೆ ಆಸೆ ಇದ್ದರೂ, ನಿರ್ಮಾಪಕರು ಮಾತ್ರ ಮನಸ್ಸು ಬದಲಾಯಿಸುತ್ತಿಲ್ಲ.

ಧಾರಾವಾಹಿ ಲೋಕದ ಬಹುತೇಕ ನಿರ್ಮಾಪಕರು ಸೇರಿ, ಮಾಧ್ಯಮಗೋಷ್ಠಿಯಲ್ಲೇ ಅನಿರುದ್ಧ ಅವರ ಜೊತೆ ತಾವ್ಯಾರೂ ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಜೀ ಕನ್ನಡ ವಾಹಿನಿಯ ಪ್ರತಿನಿಧಿಯೇ ಮಾಧ್ಯಮ ಗೋಷ್ಠಿಯಲ್ಲಿ ಪಾಲ್ಗೊಂಡು ತಾವು ನಿರ್ಮಾಪಕರ ನಿರ್ಧಾರವನ್ನು ಗೌರವಿಸುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ ಏನೇ ಹೋರಾಟ ನಡೆದರೂ, ಅನಿರುದ್ಧ ಅವರಿಗೆ ಮತ್ತೆ ಆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲು ಎಲ್ಲ ಬಾಗಿಲುಗಳು ಮುಚ್ಚಿವೆ.

Live Tv

Leave a Reply

Your email address will not be published. Required fields are marked *

Back to top button