ಬೆಂಗಳೂರು: ಇಂದು ವಿಚಾರಣೆಗೆ ಹಾಜರಾಗಿ ಎಂದು ಸೂಚಿಸಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಅತೃಪ್ತ ಶಾಸಕರು ಪತ್ರ ಬರೆದು ಹಾಜರಾಗಲು 4 ವಾರಗಳ ಸಮಯ ನೀಡಿ ಎಂದು ಕೇಳಿಕೊಂಡಿದ್ದಾರೆ.
ಪತ್ರದಲ್ಲಿ ನಾವು ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ರಾಜೀನಾಮೆಯನ್ನು ಶೀಘ್ರವೇ ಅಂಗೀಕರಿಸಬೇಕೆಂದು ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ. ಇದರ ನಡುವೆ ನಮ್ಮ ಪಕ್ಷದ ಕಡೆಯಿಂದ ಅನರ್ಹತೆ ಅರ್ಜಿ ನಿಮ್ಮ ಬಳಿ ಬಂದಿದೆ ಅಂತ ಗೊತ್ತಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಅನರ್ಹತೆ ವಿಚಾರ ಸಂಬಂಧ ಪಕ್ಷದ ಕಡೆಯಿಂದ ಯಾವುದೇ ನೋಟಿಸ್ ಬಂದಿಲ್ಲ. ಆದರೆ ಇಂದು ನೀವು ಹಾಜರಾಗಿ ಎಂದು ನೋಟಿಸ್ ನೀಡಿದ್ದೀರಿ. ಕೆಲ ಅನಿವಾರ್ಯ ಕಾರಣಗಳಿಂದ ನಾವು ಹೊರಗಡೆ ಇದ್ದು ನಿಮ್ಮ ಪ್ರಶ್ನೆಗೆ ಉತ್ತರಿಸಲು ನಮಗೆ 4 ವಾರಗಳ ಸಮಯ ಬೇಕು ಎಂದು ಸ್ಪೀಕರ್ ಅವರಿಗೆ ಅತೃಪ್ತ ಶಾಸಕರು ಪತ್ರ ಬರೆದಿದ್ದಾರೆ.
ಸೋಮವಾರ ಶಾಸಕಾಂಗ ಪಕ್ಷದ ಅಧ್ಯಕ್ಷರಿಗೆ ವಿಪ್ ನೀಡುವ ಜವಾಬ್ದಾರಿ ಇದೆ ಎಂದು ಸ್ಪೀಕರ್ ರಮೇಶ್ ಕುಮಾರ್ ರೂಲಿಂಗ್ ನೀಡಿದ್ದಾರೆ. ವಿಪ್ ನೀಡಬಹುದೋ ಇಲ್ಲವೋ ಎನ್ನುವುದರ ಬಗ್ಗೆ ಸಿದ್ದರಾಮಯ್ಯ ಕ್ರಿಯಾ ಲೋಪ ಎತ್ತಿದ್ದಾರೆ. ಶಾಸಕಾಂಗ ಪಕ್ಷದ ನಾಯಕರು ಸದಸ್ಯರಿಗೆ ವಿಪ್ ನೀಡಬಹುದು. ಅದು ಸಂವಿಧಾನದತ್ತವಾದ ಹಕ್ಕು. ಈ ವಿಚಾರದ ಬಗ್ಗೆ ನಾನು ಕಾನೂನು ಪಂಡಿತರ ಜೊತೆ ಚರ್ಚೆ ನಡೆಸಿದ್ದೇನೆ. ಇದನ್ನು ನಾನು ಅಧಿಕಾರ ಎಂದು ಕರೆಯುವುದಿಲ್ಲ. ಇದನ್ನು ಜವಾಬ್ದಾರಿ ಎಂದು ಕರೆಯುತ್ತೇನೆ. ಹೀಗಾಗಿ ಶಾಸಕಾಂಗ ನಾಯಕರು ಸದಸ್ಯರಿಗೆ ವಿಪ್ ನೀಡಬಹುದು ಎಂದು ಸ್ಪೀಕರ್ ರೂಲಿಂಗ್ ನೀಡಿದರು.
ವಿಪ್ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ಸ್ಪಷ್ಟನೆ ನೀಡುವಂತೆ ಕೋರಿದ್ದಾರೆ. ಜುಲೈ 17ರಂದು ಅತೃಪ್ತರ ಬಗ್ಗೆ ನೀಡಿರುವ ಮಧ್ಯಂತರ ಆದೇಶದಿಂದ ಗೊಂದಲ ಸೃಷ್ಟಿಯಾಗಿದೆ. ಕಲಾಪಕ್ಕೆ ಹಾಜರಾಗಬೇಕೇ? ಬೇಡವೇ ಎನ್ನುವುದನ್ನು ಶಾಸಕರ ವಿವೇಚನೆಗೆ ಬಿಡಲಾಗಿದೆ. ಈ ಆದೇಶ ರಾಜಕೀಯ ಪಕ್ಷಗಳ ವಿಪ್ ಅಧಿಕಾರವನ್ನು ಕಿತ್ತುಕೊಳ್ಳಲಿದೆ. ಶೆಡ್ಯೂಲ್ 102(1)ಬಿ ಅನ್ವಯ ರಾಜಕೀಯ ಪಕ್ಷಗಳಿಗೆ ವಿಪ್ ಅಧಿಕಾರವಿದೆ. ವಿಶ್ವಾಸಮತ ಸಾಬೀತು ವೇಳೆ ಶಾಸಕರಿಗೆ ವಿಪ್ ನೀಡುವುದು ಅನಿವಾರ್ಯವಾಗಿದೆ. ನೀವು ನೀಡಿರುವ ಆದೇಶ ಈ ವ್ಯಾಪ್ತಿಗೆ ಬರುತ್ತದೋ ಇಲ್ಲವೋ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಕೇಳಿಕೊಂಡಿದ್ದಾರೆ.