ಹಾಸನ: ಇರಲು ಮನೆ ಇಲ್ಲದೆ ಪಾಳುಬಿದ್ದ ಮನೆಯಲ್ಲೇ ಸಹೋದರಿಯರಿಬ್ಬರು ವಾಸ ಮಾಡುತ್ತಿರುವ ಸಂಗತಿ ಹಾಸನ ಸಕಲೇಶಪುರ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಹೆತ್ತೂರು ಗ್ರಾಮದಲ್ಲಿ ಮಕ್ಕಳು ಮನೆಯಿಲ್ಲದೆ ಪಾಳುಬಿದ್ದ ಮನೆಯಲ್ಲೇ ವಾಸಿಸುತ್ತಿದ್ದು, ತಾಯಿ ಇಲ್ಲದ ಈ ತಬ್ಬಲಿ ಬಾಲಕಿಯರು ತಮ್ಮ ಜೀವನವನ್ನು ನರಕದಂತೆ ಕಳೆಯುತಿದ್ದಾರೆ. ತಂದೆ ಮೈಕಲ್ ಮದ್ಯಪಾನ ಚಟಕ್ಕೆ ದಾಸನಾಗಿದ್ದು ಈತನ ಕಿರುಕುಳ ತಾಳಲಾರದೆ ತಾಯಿ ಆತ್ಮಹತ್ಯೆ ಮಾಡಿಕೊಂಡು ಹತ್ತು ವರ್ಷಗಳು ಕಳೆದಿವೆ. ಇಷ್ಟು ವರ್ಷ ಕಳೆದರೂ ಸಹ ಅಧಿಕಾರಿ ವರ್ಗ ಇವರ ಬಗ್ಗೆ ಗಮನಹರಿಸಿಲ್ಲ.
Advertisement
Advertisement
ಮದ್ಯಪಾನ ಚಟದಿಂದ ಮೈಕಲ್ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಹೀಗಾಗಿ 10ನೇ ತರಗತಿ ಓದುತ್ತಿರುವ ರೋಸಿ ಮತ್ತು ಇವಳ ತಂಗಿ ಶೀಲಾ ಆರೋಗ್ಯ ಇಲಾಖೆಗೆ ಸೇರಿದ ಹಳೇಯ ಕಟ್ಟಡದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಹಲವು ದಿನಗಳು ಕಳೆದರೂ ಸಹ ಮಕ್ಕಳ ಅಪ್ಪ ಮನೆಗೆ ಬರುವುದಿಲ್ಲ, ಹೀಗಾಗಿ ಮಕ್ಕಳು ಈಗ ಬೀದಿ ಪಾಲಾಗಿದ್ದಾರೆ.
Advertisement
Advertisement
ಹಿರಿಯ ಸಹೋದರಿ ರೋಸಿ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಾಳೆ. ಆದರೂ ಆರನೇ ತರಗತಿಯಲ್ಲಿ ಓದುತ್ತಿರುವ ತನ್ನ ತಂಗಿಯನ್ನು ನೋಡಿಕೊಳ್ಳುವ ಅನಿವಾರ್ಯತೆ ರೋಸಿಗೆ ಇದೆ. ಆದಾಯದ ಮೂಲವಿಲ್ಲದ ಕಾರಣ ಮಕ್ಕಳು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಹೀಗಾಗಿ ಪ್ರತಿ ದಿನ ನರಕದಂತೆ ಬದುಕು ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯೂ ಮಕ್ಕಳು ತಮ್ಮ ಶಿಕ್ಷಣವನ್ನು ಕೈ ಬಿಟ್ಟಿಲ್ಲ ಶಾಲೆಗೆ ಹೋಗುತ್ತ, ಮಧ್ಯಾಹ್ನ ಅಲ್ಲೇ ಬಿಸಿಯೂಟ ಮಾಡಿ ಬದುಕು ಸಾಗಿಸುತ್ತಿದ್ದಾರೆ.