ಕೊಪ್ಪಳ: ಹೈದ್ರಾಬಾದ್ ಕರ್ನಾಟಕದ ಅತ್ಯಂತ ಹಿಂದುಳಿದ ಜಿಲ್ಲೆ ಕೊಪ್ಪಳದಲ್ಲಿ ಇನ್ನೂ ಅಸ್ಪೃಶ್ಯತೆ ಎಂಬ ಪಿಡುಗು ಜೀವಂತವಾಗಿದೆ. ಅಸ್ಪೃಶ್ಯತೆ ಜೊತೆಗೆ ಕೊಪ್ಪಳ ನಗರದಲ್ಲಿ ಮತ್ತೊಂದು ಸಾಮಾಜಿಕ ಪಿಡುಗು ಬಯಲಿಗೆ ಬಂದಿದೆ. ಜಿಲ್ಲಾಡಳಿತದಿಂದ ಕೂಗಳತೆ ದೂರದಲ್ಲಿರೋ ಪ್ರದೇಶದಲ್ಲಿ ಅನಿಷ್ಠ ಪದ್ಧತಿಯೊಂದು ಜಾರಿಯಲ್ಲಿದ್ದು, ಯಾವೊಬ್ಬ ಅಧಿಕಾರಿಯೂ ಇದರ ಬಗ್ಗೆ ಗಮನ ಕೊಟ್ಟಿಲ್ಲ.
ಪ್ರಪಂಚಕ್ಕೆ ಪ್ರಪಂಚವೇ ಬದಲಾವಣೆಯ ಗಾಳಿಯಲ್ಲಿ ತೇಲುತ್ತಿದೆ. ಆದರೆ ನಮಗೆ ಮಾತ್ರ ಇನ್ನೂ ದಶಕಗಳ ಹಿಂದಿನ ಪದ್ಧತಿಯಲ್ಲಿ ಕೊರಗುವಂತಿದೆ. ಹೌದು. ಕೊಪ್ಪಳ ನಗರದಿಂದ ಸುಮಾರು 3-4 ಕಿಲೋ ಮೀಟರ್ ದೂರದಲ್ಲಿರುವ ಸಜ್ಜಿಹೊಲ ಗ್ರಾಮದಲ್ಲಿ ಹೆಣ್ಮಕ್ಕಳು ತಿಂಗಳ ಋತುಮತಿಯಾದ್ರೆ ಅಥವಾ ಮಗುವಿಗೆ ಜನ್ಮ ನೀಡಿದ್ರೆ 5 ತಿಂಗಳ ಕಾಲ ಬಾಣಂತಿಯನ್ನು ಮುಟ್ಟಿಸಿಕೊಳ್ಳದೆ ಊರ ಹೊರಗಡೆ ಇಡ್ತಾರೆ ಎಂದು ಸ್ಥಳೀಯರಾದ ಗೌರಮ್ಮ ಹೇಳಿದ್ದಾರೆ.
ಈ ಸಜ್ಜಿಹೊಲ ಗ್ರಾಮದಲ್ಲಿ ಸುಮಾರು 30 ಅಡವಿ ಬೆಂಚರ ಕುಟುಂಬ ವಾಸ ಮಾಡುತ್ತಿದೆ. ಆಸ್ಪತ್ರೆ ಮತ್ತು ಹೊರಜಗತ್ತಿನ ಪರಿಚಯವೇ ಇಲ್ಲದೆ ಹೆಣ್ಮಕ್ಕಳು ಗರ್ಭಿಣಿಯಾದರೆ ತಾವೇ ಹೆರಿಗೆಯನ್ನು ಮಾಡಿಕೊಳ್ಳಬೇಕಾದ ದುಸ್ಥಿತಿ. 5 ತಿಂಗಳು ಮಗುವಿನ ನಿತ್ಯಕರ್ಮ, ಲಾಲನೆಯನ್ನು ನೋಡಿಕೊಳ್ಳಬೇಕು. ಇವರಿಗೆ ಯಾರಾದರೂ ನೆರವಾದರೆ ಅಂತಹವರ ತಲೆಕೂದಲನ್ನು ತೆಗೆಯುವ ಪದ್ಧತಿಯೂ ರೂಢಿಯಲ್ಲಿಟ್ಟುಕೊಂಡಿದ್ದಾರೆ. ಮೂಲ ಸೌಕರ್ಯ ಇಲ್ಲದ ಸಣ್ಣ ಪುಟ್ಟ ಗುಡಿಸಲಿನಲ್ಲಿ ದಿನದೂಡುವಂತಹ ಸ್ಥಿತಿ ಇಲ್ಲಿನ ಹೆಣ್ಮಕ್ಕಳದ್ದಾಗಿದೆ ಎಂಂದು ನಗರಸಭೆ ಸದಸ್ಯ ರಮೇಶ್ ಹೇಳುತ್ತಾರೆ.
ಒಟ್ಟಾರೆ ಓರ್ವ ಪುರುಷನ ಸರ್ವಸಮನಾಗಿ ನಿಂತಿರುವ ಮಹಿಳೆಗೆ ವಿಶ್ವವೇ ಗೌರವ ನೀಡುತ್ತಿದೆ. ಆದ್ರೆ ಈ ಗ್ರಾಮದಲ್ಲಿ ಮಾತ್ರ ಮಹಿಳೆ ತಾನು ಹೆಣ್ಣಾಗಿ ಹುಟ್ಟಿದ್ದೇ ತಪ್ಪು ಎಂದು ಕೊರಗುತ್ತಿದ್ದಾರೆ. ತಮಗೆ ಹೆಣ್ತನ ಕೊಟ್ಟ ದೇವರಿಗೆ ಶಪಿಸುತ್ತಿದ್ದಾರೆ. ಜನಪ್ರತಿನಿಧಿಗಳಾದರೂ ಈ ಜನಾಂಗಕ್ಕೆ ಹೊರಜಗತ್ತು ತೋರಿಸಿ ಅನಿಷ್ಠ ಪದ್ಧತಿ ತೊಲಗಿಸಿ ಬದಲಾವಣೆಯನ್ನು ತರಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv