ಲಕ್ನೋ: ಉತ್ತರಪ್ರದೇಶದ ಗೋರಖ್‍ಪುರ ಜಿಲ್ಲೆಯ ಮೂರು ವರ್ಷದ ಪೋರಿಯೊಬ್ಬಳು ತನ್ನ ತಾಯಿ ಶಾಲೆಗೆ ಕಳುಹಿಸುತ್ತಿಲ್ಲವೆಂದು ಪೊಲೀಸರ ಬಳಿಯೇ ದೂರನ್ನು ನೀಡಿದ್ದಾಳೆ.
ಸಂತ ಕಬೀರ್ ನಗರದ ಮಕ್ಸೂದ್ ಖಾನ್ ಹಾಗೂ ಅಸ್ಮಾ ಖಾನ್ ದಂಪತಿಯ ಪುತ್ರಿ ಫಾಲಕ್ ತನ್ನ ತಾಯಿಯ ವಿರುದ್ಧವೇ ದೂರನ್ನು ನೀಡಿದ್ದಾಳೆ. ಫಾಲಕ್ ತನ್ನ ತಾಯಿಯ ವಿರುದ್ಧವೇ ದೂರನ್ನ ನೀಡಿದ್ದನ್ನು ಕಂಡ ಪೊಲೀಸರು ಬಾಲಕಿಯ ತೊದಲು ಮಾತಿಗೆ ಮರುಳಾಗಿದ್ದಾರೆ. ಅಲ್ಲದೇ ಆಕೆಯನ್ನು ಖುದ್ದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರವರು ಅವರ ಮನೆಗೆ ಕರೆದುಕೊಂಡು ಹೋಗಿ, ಬಾಲಕಿಯ ಸಮಸ್ಯೆಯನ್ನು ಬಗೆಹರಿಸಿದ್ದಾರೆ.
Advertisement
Advertisement
ಬಾಲಕಿಯ ತಂದೆ ಮುಂಬಯಿಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತನ್ನ ತಾಯಿಯೊಂದಿಗೆ ಕಬೀರ್‍ನಗರದಲ್ಲಿ ವಾಸವಾಗಿದ್ದಳು. ತಾಯಿ ಯಾವಾಗಲೂ ತನ್ನ 7 ತಿಂಗಳ ತಮ್ಮನ್ನನ್ನು ನೋಡಿಕೊಳ್ಳುತ್ತಾ, ತನ್ನನ್ನು ಶಾಲೆಗೆ ಕಳುಹಿಸುತ್ತಿಲ್ಲವೆಂದು ಕೋಪಗೊಂಡು ಮನೆಯ ಹತ್ತಿರವಿರುವ ಪೊಲೀಸ್ ಠಾಣೆಗೆ ಒಬ್ಬಳೇ ಹೋಗಿದ್ದಾಳೆ. ಅಲ್ಲದೇ ದಾರಿಯಲ್ಲಿ ಪೊಲೀಸ್ ಠಾಣೆ ಎಲ್ಲಿದೆ ಎಂದು ಕೇಳುತ್ತಾ, ಸರಿಯಾಗಿ ಪಂಚಪೋಖ್ರಿ ಪೊಲೀಸ್ ಠಾಣೆಗೆ ಹೋಗಿ ದೂರುನ್ನು ನೀಡಿದ್ದಾಳೆ.
Advertisement
ಈ ಕುರಿತು ಮಾತನಾಡಿದ ಸಬ್ ಇನ್ಸ್‌ಪೆಕ್ಟರ್ ಜಿತೇಂದ್ರ ಯಾದವ್, ಮಕ್ಕಳು ಸಾಮಾನ್ಯವಾಗಿ ಪೊಲೀಸರೆಂದರೆ ಭಯಗೊಳ್ಳುತ್ತಾರೆ. ಆದರೆ ನನ್ನಲ್ಲಿಗೆ ಬಂದ ಬಾಲಕಿ, ನೀವು ನಮ್ಮ ಮನೆಗೆ ಬಂದು ಅಮ್ಮನಿಗೆ ಗದರಿಸಬೇಕು. ಆಕೆ ನನ್ನನ್ನು ಶಾಲೆಗೆ ಕಳುಹಿಸುತ್ತಿಲ್ಲ. ಒಣ ಹುಲ್ಲಿನ ಹಾಸಿಗೆ ಮೇಲೆ ಮಲಗಿಸುತ್ತಾಳೆ. ಅಷ್ಟೇ ಅಲ್ಲ ನನ್ನ ಬಗ್ಗೆ ಗಮನವನ್ನೇ ಕೊಡುವುದಿಲ್ಲ. ಸದಾ 7 ತಿಂಗಳ ತಮ್ಮನ ಕಡೆಗೆ ಕಾಳಜಿ ವಹಿಸುತ್ತಾಳೆ ಎಂದು ದೂರಿದ್ದಳು. ನನ್ನ ಜೀವನದ ಅತಿ ಚಿಕ್ಕ ದೂರುದಾರಳನ್ನು ಕಂಡು ನನಗೆ ರೋಮಾಂಚನವಾಯಿತು ಎಂದು ಹೇಳಿದ್ದಾರೆ.
Advertisement
ಬಾಲಕಿಯೊಂದಿಗೆ ಆಕೆಯ ಮನೆಗೆ ಹೋಗಿ, ಆಕೆಯನ್ನು ಪ್ರತಿದಿನ ಶಾಲೆಗೆ ಕಳುಹಿಸಿ ಮತ್ತು ಮಗನಂತೆ ಆಕೆಯ ಬಗ್ಗೆ ಕೂಡ ಗಮನಹರಿಸುವಂತೆ ತಾಯಿಯ ಬಳಿ ಹೇಳಿದ್ದೇನೆ. ತಾಯಿಯೂ ಸಹ ಮಗಳನ್ನು ಪ್ರತಿದಿನ ಶಾಲೆಗೆ ಕಳುಹಿಸಲು ಒಪ್ಪಿಕೊಂಡಿದ್ದಾರೆ. ಅಲ್ಲದೇ ಪುಟ್ಟ ಮಗುವಿರುವುದರಿಂದ ಫಾಲಕ್ ಕಡೆ ಹೆಚ್ಚಿನ ಗಮನ ನೀಡಲಾಗದೇ ಇರುವುದನ್ನು ಆಕೆಯ ತಾಯಿ ಒಪ್ಪಿಕೊಂಡಿದ್ದಾರೆಂದು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಫಾಲಕ್, ಪೊಲೀಸ್ ಅಂಕಲ್ ತುಂಬ ಒಳ್ಳೆಯವರು. ನಾನು ಇವತ್ತು ಶಾಲೆಗೆ ಹೋಗಿದ್ದೆ. ನಾನು ಒಂದು ದಿನ ಕೂಡ ಶಾಲೆ ತಪ್ಪಿಸಲು ಬಯಸುವುದಿಲ್ಲ. ನಾನು ಚೆನ್ನಾಗಿ ಓದಿ ಡಾಕ್ಟರ್ ಆಗಬೇಕೆಂದು ಹೇಳಿಕೊಂಡಿದ್ದಾಳೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv