ಚಿಕ್ಕಬಳ್ಳಾಪುರ: ಮುಂಜಾನೆಯ ಮಬ್ಬುಗತ್ತಲಲ್ಲಿ ಚಿಕ್ಕಬಳ್ಳಾಪುರದ ಚಾರಣಿಗರ ಪಾಲಿನ ಸ್ವರ್ಗ ಅಂತಲೇ ಪ್ರಸಿದ್ಧ ಪಡೆದಿರುವ ಸ್ಕಂದಗಿರಿ ಬೆಟ್ಟ ಹತ್ತಿದ ಯುವಕ-ಯುವತಿಯರ ತಂಡ ದಾರಿ ಕಾಣದೆ ಬೆಟ್ಟದ ಮಧ್ಯೆ ಪರದಾಡಿದ ಘಟನೆ ನಡೆದಿದೆ.
ಬೆಂಗಳೂರು ಮೂಲದ ಯುವಕರಾದ ದರ್ಶಿತ್, ರಾಜೇಶ್, ಬಿನಯ್, ಹಾಗೂ ಯುವತಿಯರಾದ ಶಾಶ್ವತಿ, ಶ್ವೇತ ಹಾಗೂ ಸಿಲ್ಕಿ ಎಂಬವರು ಮುಂಜಾನೆ 4 ಗಂಟೆ ಸುಮಾರಿಗೆ ಸ್ಕಂದಗಿರಿ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದಾರೆ. ಅಸಲಿಗೆ ಸ್ಕಂದಗಿರಿ ಬೆಟ್ಟದ ಚಾರಣಕ್ಕೆ ಅಂತ ಸರ್ಕಾರವೇ ತಲಾ 250 ರೂಪಾಯಿ ದರ ನಿಗದಿ ಮಾಡಿದ್ದು, ಗೈಡ್ ಗಳ ಮೂಲಕ ಚಾರಣಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಆದರೆ ಈ ಆರು ಮಂದಿ ಯುವಕ-ಯುವತಿಯರು ಟಿಕೆಟ್ ಖರೀದಿ ಮಾಡದೆ ಅಕ್ರಮವಾಗಿ ಅಡ್ಡದಾರಿ ಹಿಡಿದು ಚಾರಣಕ್ಕೆ ತೆರಳಿದ್ದಾರೆ.
Advertisement
Advertisement
ಹೀಗಾಗಿ ಬೆಟ್ಟದ ತುತ್ತ ತುದಿ ತಲಪುವ ಮಾರ್ಗ ತಿಳಿಯದ ಆರು ಮಂದಿ ಯುವಕ-ಯುವತಿಯರು ಆಗೋ ಹಿಗೋ ಕಷ್ಟಪಟ್ಟು ಅರ್ಧ ಬೆಟ್ಟ ಏರಿದ್ದಾರೆ. ಆದರೆ ಮಬ್ಬುಗತ್ತಲಲ್ಲಿ ಬೆಟ್ಟ ಹತ್ತಿದ್ದ ಯುವಕ ಯುವತಿಯರಿಗೆ ಮುಂದೆ ಬೆಟ್ಟ ಏರಲಾಗದೆ ಮಧ್ಯೆ ಸಿಲುಕಿ ಪರದಾಡಿದ್ದಾರೆ. ಕೊನೆಗೆ ಬೆಳಗಾಗುವರೆಗೂ ಅಲ್ಲೆ ಇದ್ದರು. ಆದರೆ ಬೆಳಕಾದ ಮೇಲೆಯೂ ಬೆಟ್ಟದಿಂದ ಕೆಳಗಿಳಿಯುವುದಕ್ಕೆ ದಾರಿ ಕಾಣದ ಯುವಕ-ಯುವತಿಯರು ಪರದಾಡಿದ್ದಾರೆ.
Advertisement
ಇಂದು ಸುಮಾರು 2 ಗಂಟೆ ಅಲ್ಲೇ ಕಾಲ ಕಳೆದು ಕೊನೆಗೆ ವಿಧಿಯಿಲ್ಲದೆ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಈ ವೇಳೆ ಪೋಲಿಸರು ಉರಗತಜ್ಞ ಹಾಗೂ ವನ್ಯ ಜೀವಿ ಸಂರಕ್ಷಕ ಪ್ರಥ್ವಿರಾಜ್ ಮೊಬೈಲ್ ಸಂಖ್ಯೆ ನೀಡಿದ್ದಾರೆ. ಆಗ ಪ್ರಥ್ವಿರಾಜ್ ಗೆ ಯುವಕ ದರ್ಶಿತ್ ಕರೆ ಮಾಡಿ ತಮ್ಮನ್ನ ರಕ್ಷಣೆ ಮಾಡುವಂತೆ ಮೊರೆಯಿಟ್ಟಿದ್ದಾನೆ. ಮಾಹಿತಿ ಅರಿತ ಪ್ರಥ್ವಿರಾಜ್ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಯುವಕ-ಯುವತಿಯರ ರಕ್ಷಣೆಗೆ ಮುಂದಾಗಿದ್ದಾರೆ.
Advertisement
ಮೊಬೈಲ್ ಮೂಲಕ ಯುವಕ-ಯುವತಿಯರಿದ್ದ ಸ್ಥಳದ ಮಾಹಿತಿ ತಿಳಿದುಕೊಂಡು ಅರಣ್ಯ ಇಲಾಖಾ ಸಿಬ್ಬಂದಿ ಹಾಗೂ ಪ್ರಥ್ವಿರಾಜ್ ಎರಡು ಗಂಟೆಗೂ ಹೆಚ್ಚು ಕಾಲ ಬೆಟ್ಟದಲ್ಲಿ ಅಲೆದಾಡಿ ಯುವಕ-ಯುವತಿಯರನ್ನ ಪತ್ತೆ ಹಚ್ಚಿದ್ದಾರೆ. ಕೊನೆಗೆ ಸಿಕ್ಕ ಯುವಕ ಯುವತಿಯರನ್ನ ಹರಸಾಹಸ ಪಟ್ಟು ಕೆಳಗೆ ಕರೆ ತಂದಿದ್ದಾರೆ. ಸದ್ಯ ಆರು ಮಂದಿ ಯುವಕ-ಯುವತಿಯರನ್ನ ಚಿಕ್ಕಬಳ್ಳಾಪುರ ಅರಣ್ಯ ಇಲಾಖಾಧಿಕಾರಿಗಳು ವಶಪಡಿಸಿಕೊಂಡಿದ್ದು, ಯುವಕ-ಯುವತಿಯರ ಬಳಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ತಲಾ 2000 ರೂ. ದಂಡ ವಿಧಿಸಲು ಮುಂದಾಗಿದ್ದಾರೆ.
ಅಂದ ಹಾಗೆ ಅರಣ್ಯ ಪ್ರದೇಶವೂ ಆಗಿರುವ ಸ್ಕಂದಗಿರಿಯನ್ನ ಅಕ್ರಮವಾಗಿ ಪ್ರವೇಶ ಮಾಡಿದರೆ 2 ವರ್ಷ ಜೈಲು ಅಥವಾ 2000 ದಂಡ ವಿಧಿಸಬಹುದಾಗಿದೆ. ಇಲ್ಲವಾದಲ್ಲಿ ಎರಡು ಸಹ ವಿಧಿಸಬಹುದಾಗಿದೆ. ಆದರೆ ಈ ರೀತಿ ಅದೆಷ್ಟೋ ಮಂದಿ ಅಡ್ಡದಾರಿ ಹಿಡಿದು ಫಜೀತಿ ಪಟ್ಟ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿವೆ. ಹೀಗಾಗಿ ಅಡ್ಡದಾರಿ ಹಿಡಿದು ಟ್ರೆಕ್ಕಿಂಗ್ ಮಾಡುವ ಮುನ್ನ ಎಚ್ಚರವಿರಲಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv