Bellary
ಆತ್ಮಹತ್ಯೆ ಮಾಡ್ಕೊಂಡ ಪ್ರಿಯತಮೆಯ ಶವವನ್ನು ಬೆನ್ನಿಗೆ ಕಟ್ಕೊಂಡು ಠಾಣೆಗೆ ತಂದ ಪ್ರಿಯಕರ!

ಬಳ್ಳಾರಿ: ತನ್ನ ಕಣ್ಣೆದುರೇ ಆತ್ಮಹತ್ಯೆ ಮಾಡಿಕೊಂಡ ಪ್ರಿಯತಮೆಯ ಶವವನ್ನು ಪ್ರಿಯಕರ ಬೆನ್ನಿಗೆ ಕಟ್ಟಿಕೊಂಡು ಬೈಕ್ ನಲ್ಲಿ ಠಾಣೆಗೆ ತಂದ ಹೃದಯವಿದ್ರಾವಕ ಘಟನೆಯೊಂದು ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
ಸಿರುಗುಪ್ಪ ತಾಲೂಕಿನ ಸಿರಿಗೆರೆಯ ಹುಚ್ಚೇಶ್ವರ ನಗರದ ಹನುಮಂತಮ್ಮ(19) ಹಾಗೂ ಹಣ್ಣಿನ ವ್ಯಾಪಾರಿ ದಾವಲ್ ಸಾಬ್ ಕಳೆದ ಮೂರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ದಾವಲ್ ಸಾಬ್ ಪೋಷಕರು ಇದನ್ನು ಒಪ್ಪದೆ ಮಗನ ಮನವೊಲಿಸಿ ಬೇರೆ ಹುಡುಗಿಯನ್ನು ನೋಡಿ ವಿವಾಹ ಮಾಡಲು ಮುಂದಾಗಿದ್ದರು.
ಅಂತೆಯೇ ದಾವಲ್ ಸಾಬ್ ಗೆ ಬೇರೆ ಕಡೆ ವಧು ಸಹ ನಿಶ್ಚಯವಾಗಿತ್ತು. ದಾವಲ್ ಸಾಬ್ ಮದುವೆಯ ಬಗ್ಗೆ ಮಾತುಕತೆ ನಡೆಯುವ ವಿಚಾರ ತಿಳಿದ ಪ್ರಿಯತಮೆ ಹನುಮಂತಮ್ಮ ಭಾನುವಾರ ದಾವಲ್ ಸಾಬ್ ಜೊತೆ ಮಾತನಾಡುವ ವೇಳೆ ಆತನ ಕಣ್ಣೆದುರೇ ನೇಣಿಗೆ ಶರಣಾಗಿದ್ದಾಳೆ.
ದಾವಲ್ ಸಾಬ್ ತನ್ನ ಪ್ರೇಯಸಿಯನ್ನು ಸಮಾಧಾನಪಡಿಸುವ ವೇಳೆಯಲ್ಲೇ ಘಟನೆ ನಡೆದೇ ಹೋಯಿತು. ಇದರಿಂದ ಆತಂಕಗೊಂಡ ದಾವಲ್ ಸಾಬ್ ಆತ್ಮಹತ್ಯೆ ಮಾಡಿಕೊಂಡ ಹನುಮಂತಮ್ಮಳ ಶವವನ್ನು ತನ್ನ ಬೆನ್ನಿಗೆ ಕಟ್ಟಿಕೊಂಡು ಬೈಕ್ ನಲ್ಲಿ ನೇರವಾಗಿ ಠಾಣೆಗೆ ಬಂದು ಶರಣಾಗಿದ್ದಾನೆ.
ಸದ್ಯ ಪೊಲೀಸರು ದಾವಲ್ ಸಾಬ್ ನನ್ನು ವಶಕ್ಕೆ ಪಡೆದಿದ್ದು, ಹನುಮಂತಮ್ಮಳ ಸಾವಿಗೆ ಈತನೇ ಕಾರಣವೆಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಈ ಸಂಬಂಧ ಸಿರಗುಪ್ಪ ತಾಲೂಕಿನ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
