ಶಿವಮೊಗ್ಗ: ಮೂರ್ಛೆ ರೋಗ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವತಿಯೊಬ್ಬಳು ನೋವು ತಾಳಲಾರದೇ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದ ವಿದ್ಯಾನಗರ ಸಮೀಪದ ರೈಲ್ವೆ ಹಳಿ ಬಳಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ವಿದ್ಯಾನಗರದ ನಿವಾಸಿ ರಕ್ಷಿತಾ (18) ಎಂದು ಗುರುತಿಸಲಾಗಿದೆ. ವಿದ್ಯಾನಗರ ಬಡಾವಣೆಯ 4ನೇ ಕ್ರಾಸ್ ನಲ್ಲಿ ವಾಸವಾಗಿದ್ದ ರಕ್ಷಿತಾ ಹಲವು ದಿನಗಳಿಂದ ಮೂರ್ಛೆ ರೋಗ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು.
ಮನೆಯಲ್ಲಿ ತಾಯಿ ಮಗಳು ಇಬ್ಬರೇ ವಾಸವಿದ್ದರು. ತಂದೆ ಹಲವು ವರ್ಷದ ಹಿಂದೆಯೇ ಮೃತಪಟ್ಟಿದ್ದರು. ಜೀವನೋಪಾಯಕ್ಕಾಗಿ ರಕ್ಷಿತಾ ತಾಯಿ ಮಹಾದೇವಿ ಹಲವು ಮನೆಗಳಲ್ಲಿ ಮನೆ ಕೆಲಸ ಮಾಡಿಕೊಂಡು ಮಗಳನ್ನು ಸಾಕುತ್ತಿದ್ದರು.
ಕಳೆದೆರಡು ದಿನದ ಹಿಂದೆ ಮಹಾದೇವಿ ಮಗಳಿಗೆ ಶಸ್ತ್ರಚಿಕಿತ್ಸೆ ಸಹ ಮಾಡಿಸಿದ್ದರು. ಆದರೆ ತೀವ್ರವಾದ ನೋವು ತಾಳಲಾರದೇ ಇಂದು ತಾಯಿ ಮನೆಯಿಂದ ಕೆಲಸಕ್ಕೆಂದು ಹೊರಗೆ ತೆರಳಿದ ನಂತರ ರಕ್ಷಿತಾ ರೈಲಿಗೆ ಸಿಲುಕಿ ಕೊನೆಯುಸಿರು ಎಳೆದಿದ್ದಾಳೆ.
ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.