– ಟಿಕ್‍ಟಾಕ್ ಮೂಲಕ ಧನ್ಯವಾದ
ಬೆಂಗಳೂರು: ತಾಯಿಗೆ ಸಕಾಲಕ್ಕೆ ಔಷಧಿ ದೊರಕಿಸಿದ್ದಕ್ಕೆ ಸಿಎಂ ಯಡಿಯೂರಪ್ಪ, ಬಿ.ವೈ ವಿಜಯೇಂದ್ರ ಮತ್ತು ರಾಮದುರ್ಗ ತಹಶೀಲ್ದಾರ್ ಅವರಿಗೆ ಮಗಳು ಪವಿತ್ರ ಅರಭಾವಿ ಕೃತಜ್ಞತೆ ಸಲ್ಲಿದ್ದಾರೆ.
ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ಮಹಿಳೆಗೆ ಆಪರೇಷನ್ ಮಾಡಿ ಕಿಡ್ನಿ ಕಸಿ ಮಾಡಿದರೂ, ಸೂಕ್ತ ಔಷಧಿ ಇಲ್ಲದೆ ನರಳಾಡುತ್ತಿದ್ದರು. ನಂತರ ಮಗಳು ಪವಿತ್ರಾ ಅರಭಾವಿ ಟಿಕ್‍ಟಾಕ್ ಮೂಲಕವೇ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದಿದ್ದರು. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಕ್ಷಣವೇ ಸ್ಪಂದಿಸಿದ್ದು, ಮಹಿಳೆಗೆ ಒಂದು ತಿಂಗಳ ಔಷಧಿ ವ್ಯವಸ್ಥೆ ಮಾಡುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು.
Advertisement
Advertisement
ಈ ಹಿನ್ನೆಲೆಯಲ್ಲಿ ಪವಿತ್ರಾ ಅರಭಾವಿ ಕುಟುಂಬಕ್ಕೆ ಸಕಾಲಕ್ಕೆ ಔಷಧಿ ದೊರಕಿಸಿದ್ದಕ್ಕೆ ಅದೇ ಟಿಕ್‍ಟಾಕ್ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳಿಗೆ, ಅವರ ಪುತ್ರ ವಿಜಯೇಂದ್ರ ಅವರಿಗೂ ತುಂಬಾ ಧನ್ಯವಾದಗಳು. ಯಾಕೆಂದರೆ ನಮ್ಮ ಕುಟುಂಬಕ್ಕೆ ಇದ್ದ ಕಷ್ಟವನ್ನು ತಮ್ಮ ಕುಟುಂಬದ ಕಷ್ಟ ಅಂದುಕೊಂಡು ರಾತ್ರೋರಾತ್ರಿ ನಮ್ಮ ಮನೆವರೆಗೂ ಮಾತ್ರೆ ತಲುಪಿಸಿದ್ದಾರೆ. ಅಲ್ಲದೇ ರಾಮದುರ್ಗ ತಹಶೀಲ್ದಾರ್ ನಮಗೆ ಬಂದು ಔಷಧಿ ಕೊಟ್ಟಿದ್ದಾರೆ. ಹೀಗಾಗಿ ಎಲ್ಲಾ ಇಲಾಖೆಯ ಅಧಿಕಾರಿಗಳಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.
Advertisement
Advertisement
ಟಿಕ್‍ಟಾಕ್ ಮೂಲಕ ಮನವಿ:
ಬೆಳಗಾವಿಯ ಜಿಲ್ಲೆಯ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ಶೇಖವ್ವ ಅರಂಭಾವಿ ಅವರು ಕಿಡ್ನಿ ವೈಫಲ್ಯದಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆ ವೇಳೆ ಪತಿ ಪತ್ನಿಗಾಗಿ ತಮ್ಮ ಒಂದು ಕಿಡ್ನಿ ದಾನ ಮಾಡಿದ್ದರು. ಜನವರಿ 17ರಂದು ಹುಬ್ಬಳ್ಳಿಯ ಎಸ್‍ಡಿಎಂ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಲಾಗಿತ್ತು. ಆದರೆ ಲಾಕ್‍ಡೌನ್ ಘೋಷಣೆಯಾದ ಕಾರಣ ಶೇಖವ್ವ ಅವರಿಗೆ ಅಗತ್ಯ ಔಷಧಿಗಳು ದೊರೆಯದೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು.
ಏನು ಮಾಡುವುದು ಎಂದು ತೋಚದೇ ಅವರ ಕುಟುಂಬ ತೀವ್ರ ನೋವಿನಲ್ಲಿತ್ತು. ಆಗ ಶೇಖವ್ವ ಅವರ ಮಗಳು ಪವಿತ್ರ ಹೊಳಿದಿದ್ದೇ ಟಿಕ್‍ಟಾಕ್. ಟಿಕ್‍ಟಾಕ್‍ನಲ್ಲಿ ವಿಡಿಯೋ ಮಾಡಿ, ತನ್ನ ತಾಯಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಕುರಿತು ಪವಿತ್ರ ತಿಳಿಸಿದ್ದರು. ಅಲ್ಲದೆ ಮುಖ್ಯಮಂತ್ರಿಗಳು ಈ ಕುರಿತು ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದರು. ಈ ವಿಡಿಯೋ ಸಿಎಂ ಗಮನಕ್ಕೆ ಬಂದಿದ್ದು, ತಕ್ಷಣವೇ ಎಚ್ಚೆತ್ತ ಬಿಎಸ್‍ವೈ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಪರಿಹಾರಕ್ಕೆ ಸೂಚಿಸಿದ್ದಾರೆ.
ಬೆಳಗಾವಿಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ಶೇಖವ್ವ ಅರಂಭಾವಿ ಅವರಿಗೆ ತಕ್ಷಣವೇ ಒಂದು ತಿಂಗಳಿಗಾಗುವಷ್ಟು ಅಗತ್ಯ ಔಷಧಿಗಳನ್ನು ಪೂರೈಸಿ ಎಂದು ಆದೇಶಿಸಿದ್ದರು. ಸಿಎಂ ಆದೇಶಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಶೇಖವ್ವ ಅರಂಭಾವಿ ಅವರಿಗೆ ಅಗತ್ಯ ಔಷಧಿ ಪೂರೈಸಿ, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದರು.